ಕಟ್ಟಿಗೆ ಮಾರಬೇಡಿ… ಸುಟ್ಟು ಬೂದಿ ಮಾಡಬೇಡಿ!

ಕಟ್ಟಿಗೆ ಮಾರಬೇಡಿ... ಸುಟ್ಟು ಬೂದಿ ಮಾಡಬೇಡಿ!

ಕೊಳೆತ ಮರವೇ ಮಣ್ಣಿನ ಫಲವತ್ತತೆಯ ನೈಸರ್ಗಿಕ ಖಜಾನೆ. ಕಟ್ಟಿಗೆ ಎಂದು ಅದನ್ನು ಮಾರಾಟ ಮಾಡುವುದರಿಂದ ಬರುವ ಹಣಕ್ಕಿಂತ  ಇದು ಮಣ್ಣಿಗೆ ಕೊಡುವ  ನೈಜ ಸಾವಯವ ಅಂಶಕ್ಕೆ  ಅಧಿಕ ಮೌಲ್ಯ.

ಒಂದು ಟನ್ ಕಟ್ಟಿಗೆಯನ್ನು ಮಾರಿದರೆ ರೈತನಿಗೆ ಸುಮಾರು ₹4,000 ಸಿಗಬಹುದು. ಅದೇ ಮರವನ್ನು ಹೊಲದಲ್ಲೇ ಕೊಳೆಯಲು ಬಿಟ್ಟರೆ ಅದರ ಮೌಲ್ಯ ಎಷ್ಟು ಗೊತ್ತೇ? ಅದು ಹಣದಿಂದ ಅಳೆಯಲಾಗದಷ್ಟು ಅಮೂಲ್ಯ. ಏಕೆಂದರೆ ಕೊಳೆತ ಮರ ಮಣ್ಣಿನಲ್ಲಿ ಹ್ಯೂಮಸ್ (Humus) ನಿರ್ಮಿಸಿ, ಕೋಟ್ಯಂತರ ಸೂಕ್ಷ್ಮಜೀವಿಗಳಿಗೆ ಆಶ್ರಯ ನೀಡಿ, ಮಣ್ಣಿನ ಫಲವತ್ತತೆಯನ್ನು ವರ್ಷಗಳವರೆಗೆ ಹೆಚ್ಚಿಸುತ್ತದೆ.

ದುರದೃಷ್ಟವಶಾತ್ ಇಂದು ಅನೇಕ ರೈತರು ತೋಟಗಳಲ್ಲಿ ಬಿದ್ದಿರುವ ಮರದ ದಿಮ್ಮಿಗಳು, ಕೊಂಬೆಗಳು, ಮರದ ಚೂರುಗಳು ಮತ್ತು ಮೃದುವಾದ ಮರಗಳನ್ನು ಕಟ್ಟಿಗೆಯಾಗಿ ಮಾರಿಬಿಡುತ್ತಾರೆ. ಕೆಲವರು ಹೊಲದಲ್ಲೇ ಸುಟ್ಟು ಹಾಕುತ್ತಾರೆ. ಇದರಿಂದ ಕೇವಲ ಮರವೇ ನಷ್ಟವಾಗುವುದಿಲ್ಲ; ಮಣ್ಣಿನ ಜೀವಶಕ್ತಿ, ಸಾವಯವ ಕಾರ್ಬನ್ ಮತ್ತು ಭವಿಷ್ಯದ ಫಲವತ್ತತೆಯೂ ಕಳೆದುಹೋಗುತ್ತದೆ.

ಪ್ರಕೃತಿಯಲ್ಲಿ ಯಾವುದೂ ವ್ಯರ್ಥವಾಗುವುದಿಲ್ಲ. ಕಾಡಿನಲ್ಲಿ ಬಿದ್ದಿರುವ ಒಂದು ಮರದ ದಿಮ್ಮಿಯೂ ಸಹ ಮುಂದಿನ ಪೀಳಿಗೆಯ ಮಣ್ಣನ್ನು ಸೃಷ್ಟಿಸುವ ಮಹತ್ವದ ಕೆಲಸ ಮಾಡುತ್ತದೆ. ಇದೇ ಕಾರಣಕ್ಕೆ ಸಾವಿರಾರು ವರ್ಷಗಳಿಂದ ಕಾಡಿನ ಮಣ್ಣು ಯಾವುದೇ ರಾಸಾಯನಿಕ ಗೊಬ್ಬರವಿಲ್ಲದೆ ಫಲವತ್ತಾಗಿ ಉಳಿದಿದೆ. ಮಣ್ಣು ಎಂಬುದು ಫಲವತ್ತತೆಯತ್ತ ಸಾಗಲು ಇಂತಹ ವಸ್ತುಗಳು ಮರಳಿ ಮರಳಿ ಮಣ್ಣಿಗೆ ಸೇರುತ್ತಲೇ ಇರಬೇಕು.

ಮರ ಎಂದರೆ ಕೇವಲ ಕಟ್ಟಿಗೆಯಲ್ಲ– ಗಣಿ;

ನಾವು ಮರವನ್ನು ಕೇವಲ ಇಂಧನ ಎಂದು ಭಾವಿಸುತ್ತೇವೆ. ಆದರೆ ಮಣ್ಣಿನ ವಿಜ್ಞಾನದ ದೃಷ್ಟಿಯಿಂದ ಅದು ಒಂದು ಸಾವಯವ ಪೋಷಕಾಂಶಗಳ ಭಂಡಾರ.

ಮರದಲ್ಲಿ ಮುಖ್ಯವಾಗಿ ಮೂರು ಪ್ರಮುಖ ಸಾವಯವ ಸಂಯುಕ್ತಗಳಿವೆ.

  • ಸೆಲ್ಯುಲೋಸ್ (Cellulose) – 40 ರಿಂದ 50%
  • ಹೆಮಿಸೆಲ್ಯುಲೋಸ್ (Hemicellulose) – 20 ರಿಂದ 30%
  • ಲಿಗ್ನಿನ್ (Lignin) – 20 ರಿಂದ 30%

ಇವುಗಳ ಜೊತೆಗೆ ಕ್ಯಾಲ್ಸಿಯಂ, ಪೊಟ್ಯಾಶಿಯಂ, ಮೆಗ್ನೀಷಿಯಂ, ಫಾಸ್ಫರಸ್, ಗಂಧಕ, ಕಬ್ಬಿಣ, ಮ್ಯಾಂಗನೀಸ್, ಸತು, ತಾಮ್ರ ಹಾಗೂ ಬೋರಾನ್ ಮುಂತಾದ ಅನೇಕ ಖನಿಜ ಪೋಷಕಾಂಶಗಳೂ ಅಲ್ಪ ಪ್ರಮಾಣದಲ್ಲಿ ಇರುತ್ತವೆ. ಮರ ನಿಧಾನವಾಗಿ ಕೊಳೆಯುವಾಗ ಈ ಪೋಷಕಾಂಶಗಳು ಮಣ್ಣಿಗೆ ಬಿಡುಗಡೆಯಾಗಿ ಬೆಳೆಗಳಿಗೆ ಲಭ್ಯವಾಗುತ್ತವೆ.

ಯಾವ ಮರಗಳು ಬೇಗನೆ ಕೊಳೆಯುತ್ತವೆ?

ಎಲ್ಲಾ ಮರಗಳೂ ಕೊನೆಗೆ ಮಣ್ಣಿನ ಭಾಗವಾಗುತ್ತವೆ. ಆದರೆ ಮೃದುವಾದ ಮರಗಳು (Soft Woods) ಗಟ್ಟಿಮರಗಳಿಗಿಂತ ಬೇಗನೆ ಕೊಳೆಯುತ್ತವೆ.

ನಮ್ಮ ತೋಟಗಳಲ್ಲಿ ಸಾಮಾನ್ಯವಾಗಿ ಕಾಣುವ ಗ್ಲಿರಿಸಿಡಿಯಾ, ಸುಬಾಬುಲ್, ಎರಿಥ್ರಿನಾ (ಮುರಿಕ್ಕು), ಸೆಸ್ಬೇನಿಯಾ, ಸಿಲ್ವರ್ ಓಕ್, ದೂಪ, ಅತ್ತಿ, ಆಲ, ಮಾವು,  ಮುಂತಾದ ಮರಗಳು ಶೀಘ್ರವಾಗಿ ಕೊಳೆಯುವ ಗುಣ ಹೊಂದಿವೆ. ಇವುಗಳ ಕೊಂಬೆಗಳು, ತೊಗಟೆ, ಮರದ ಚೂರುಗಳು ಹಾಗೂ ಮರದ ಪುಡಿಯೂ ಉತ್ತಮ ಸಾವಯವ ಸಂಪನ್ಮೂಲಗಳಾಗಿವೆ.

ತೇಗ (ಸಾಗುವಾನಿ), ಬೀಟೆ, ಹೊನ್ನೆ ಮುಂತಾದ ಗಟ್ಟಿಮರಗಳ ತಿರುಳಿನ ಹೊರ  ಭಾಗ ಬೇಗ  ಕೊಳೆಯುತ್ತವೆ. ತಿರುಳು ನಿಧಾನವಾಗಿ ಕೊಳೆಯುತ್ತದೆ. ತಿರುಳಿನ ಮರದಲ್ಲಿ  ಲಿಗ್ನಿನ್ ಪ್ರಮಾಣ ಹೆಚ್ಚಿರುವುದರಿಂದ ಕೊಳೆಯುವ ಪ್ರಕ್ರಿಯೆ ನಿಧಾನವಾಗಿರುತ್ತದೆ.

ಕೊಳೆತ ಮರದೊಳಗೆ ನಡೆಯುವ ಅದ್ಭುತ ವಿಜ್ಞಾನ;

ಮರ ನೆಲಕ್ಕೆ ಬಿದ್ದ ಕ್ಷಣದಿಂದ ಅದರ ಜೀವನ ಮುಗಿಯುವುದಿಲ್ಲ. ಅಂದಿನಿಂದಲೇ ಪ್ರಕೃತಿಯ ಅತ್ಯಂತ ಶ್ರಮಜೀವಿಗಳಾದ ಶಿಲೀಂಧ್ರಗಳು, ಬ್ಯಾಕ್ಟೀರಿಯಾಗಳು ಮತ್ತು ಆಕ್ಟಿನೋಮೈಸೀಟ್ಸ್ ತಮ್ಮ ಕೆಲಸವನ್ನು ಆರಂಭಿಸುತ್ತವೆ.

ವಿಶೇಷವಾಗಿ ಶಿಲೀಂಧ್ರಗಳು ಮರದಲ್ಲಿರುವ ಸೆಲ್ಯುಲೋಸ್ ಮತ್ತು ಲಿಗ್ನಿನ್ ಅನ್ನು ಒಡೆಯಬಲ್ಲ ವಿಶೇಷ ಕಿಣ್ವಗಳನ್ನು (Enzymes) ಉತ್ಪಾದಿಸುತ್ತವೆ. ನಂತರ ಬ್ಯಾಕ್ಟೀರಿಯಾಗಳು ಆ ಪದಾರ್ಥಗಳನ್ನು ಇನ್ನಷ್ಟು ಸರಳ ರೂಪಕ್ಕೆ ಪರಿವರ್ತಿಸುತ್ತವೆ.

ಇದರ ಜೊತೆಗೆ ನೆಲಹುಳುಗಳು, ಗೆದ್ದಲುಗಳು, ವಿವಿಧ ಕೀಟಗಳು ಹಾಗೂ ಇತರೆ ಮಣ್ಣಿನ ಜೀವಿಗಳು ಮರವನ್ನು ಸಣ್ಣ ತುಂಡುಗಳಾಗಿ ಒಡೆದು ಸೂಕ್ಷ್ಮಜೀವಿಗಳಿಗೆ ಕೆಲಸ ಸುಲಭವಾಗುವಂತೆ ಮಾಡುತ್ತವೆ.

ಈ ಸಂಪೂರ್ಣ ಪ್ರಕ್ರಿಯೆಯಲ್ಲಿ ಲಕ್ಷಾಂತರವಲ್ಲ, ಕೋಟ್ಯಂತರ ಸೂಕ್ಷ್ಮಜೀವಿಗಳು ನಿರಂತರವಾಗಿ ಕಾರ್ಯನಿರ್ವಹಿಸುತ್ತವೆ.

ಮರ ಮಣ್ಣಿನೊಂದಿಗೆ ವಿಲೀನವಾಗುವ ಪ್ರಕ್ರಿಯೆ
ಮರ ಮಣ್ಣಿನೊಂದಿಗೆ ವಿಲೀನವಾಗುವ ಪ್ರಕ್ರಿಯೆ

ಹ್ಯೂಮಸ್ – ಮಣ್ಣಿನ ಕಪ್ಪು ಚಿನ್ನ:

ಕೊಳೆತ ಮರದ ಅತ್ಯಮೂಲ್ಯ ಕೊಡುಗೆ ಹ್ಯೂಮಸ್. ಹ್ಯೂಮಸ್ ಎಂದರೆ ಸಂಪೂರ್ಣವಾಗಿ ಕೊಳೆತು ಸ್ಥಿರ ರೂಪ ಪಡೆದ ಸಾವಯವ ಪದಾರ್ಥ. ಇದು ಮಣ್ಣಿನಲ್ಲಿ ವರ್ಷಗಟ್ಟಲೆ ಉಳಿದು ಅದರ ಗುಣಮಟ್ಟವನ್ನು ಹೆಚ್ಚಿಸುತ್ತದೆ. ಅದಕ್ಕಾಗಿಯೇ ಇದನ್ನು ಮಣ್ಣಿನ “ಕಪ್ಪು ಚಿನ್ನ“ ಎಂದು ಕರೆಯಲಾಗುತ್ತದೆ.

ಹ್ಯೂಮಸ್ ಮಣ್ಣಿಗೆ ಅನೇಕ ರೀತಿಯಲ್ಲಿ ಸಹಾಯ ಮಾಡುತ್ತದೆ.

  • ಮಣ್ಣಿನ ರಚನೆಯನ್ನು ಉತ್ತಮಗೊಳಿಸುತ್ತದೆ.
  • ಮಣ್ಣು ನೀರನ್ನು ಹೆಚ್ಚು ದಿನ ಹಿಡಿದಿಡುವಂತೆ ಮಾಡುತ್ತದೆ.
  • ಬೇರುಗಳಿಗೆ ಬೇಕಾದ ಗಾಳಿಯ ಸಂಚಾರವನ್ನು ಹೆಚ್ಚಿಸುತ್ತದೆ.
  • ಪೋಷಕಾಂಶಗಳನ್ನು ಹಿಡಿದಿಟ್ಟುಕೊಂಡು ನಿಧಾನವಾಗಿ ಬಿಡುಗಡೆ ಮಾಡುತ್ತದೆ.
  • ಮಣ್ಣಿನ ಸಾವಯವ ಕಾರ್ಬನ್ ಪ್ರಮಾಣವನ್ನು ಹೆಚ್ಚಿಸುತ್ತದೆ.
  • ಉಪಯುಕ್ತ ಸೂಕ್ಷ್ಮಜೀವಿಗಳ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.
  • ಮಣ್ಣಿನ ಫಲವತ್ತತೆಯನ್ನು ದೀರ್ಘಕಾಲ ಕಾಪಾಡುತ್ತದೆ.

ಮಣ್ಣು ಹೇಗೆ ಹುಟ್ಟುತ್ತದೆ?

ನಾವು ಇಂದು ಕೃಷಿ ಮಾಡುತ್ತಿರುವ ಮಣ್ಣು ಲಕ್ಷಾಂತರ ವರ್ಷಗಳ ಪ್ರಕೃತಿಯ ಕೊಡುಗೆ.

ಕಲ್ಲುಗಳು ಬಿಸಿಲು, ಮಳೆ, ಗಾಳಿ ಮತ್ತು ತಾಪಮಾನ ಬದಲಾವಣೆಗಳಿಂದ ನಿಧಾನವಾಗಿ ಪುಡಿಯಾಗುತ್ತವೆ. ಈ ಖನಿಜ ಕಣಗಳಿಗೆ ಎಲೆಗಳು, ಹುಲ್ಲು, ಬೇರುಗಳು, ಮರದ ಕೊಂಬೆಗಳು ಮತ್ತು ಕೊಳೆತ ಮರಗಳು ಸೇರಿ ಸಾವಯವ ಪದಾರ್ಥಗಳಾಗಿ ಪರಿವರ್ತನೆಯಾಗುತ್ತವೆ.

ಈ ಸಾವಯವ ಪದಾರ್ಥಗಳು ಮರಳು, ಸಿಲ್ಟ್ ಮತ್ತು ಜೇಡಿಮಣ್ಣಿನ ಕಣಗಳನ್ನು ಒಟ್ಟುಗೂಡಿಸಿ ಮಣ್ಣಿನ ಗುಡ್ಡೆಗಳು (Soil Aggregates) ರೂಪುಗೊಳ್ಳುವಂತೆ ಮಾಡುತ್ತವೆ. ಇವು ಮಣ್ಣಿನಲ್ಲಿ ಗಾಳಿ, ನೀರು ಮತ್ತು ಬೇರುಗಳು ಸುಲಭವಾಗಿ ಸಂಚರಿಸಲು ನೆರವಾಗುತ್ತವೆ.

ಇದರಿಂದ ಮಣ್ಣಿನಲ್ಲಿ ಜೀವವೈವಿಧ್ಯ ಹೆಚ್ಚುತ್ತದೆ. ನೆಲಹುಳುಗಳು, ಶಿಲೀಂಧ್ರಗಳು, ಬ್ಯಾಕ್ಟೀರಿಯಾಗಳು ನಿರಂತರವಾಗಿ ಪೋಷಕಾಂಶಗಳನ್ನು ಮರುಚಲಾವಣೆ ಮಾಡಿ ಮಣ್ಣನ್ನು ಜೀವಂತವಾಗಿರಿಸುತ್ತವೆ. ಕಾಡಿನ ಮಣ್ಣು ಸದಾ ಫಲವತ್ತಾಗಿರುವುದಕ್ಕೆ ಇದೇ ಪ್ರಮುಖ ಕಾರಣ.

ರೈತರು ಏನು ಮಾಡಬೇಕು?

ತೋಟದಲ್ಲಿ ಬಿದ್ದಿರುವ ಯಾವುದೇ ಮರವನ್ನೂ ಕಟ್ಟಿಗೆಯಾಗಿ ಮಾರಬೇಡಿ. ಸೊಪ್ಪು ಸದೆಗಳನ್ನೂ ಸಹ. ಅವುಗಳನ್ನು ಒಂದೆಡೆ ರಾಶಿ ಹಾಕಿ. ಅದು ಋತುಮಾನದ  ಪ್ರಾಕೃತಿಕ ಹೊಡೆತಕ್ಕೆ ಸಿಗುವಂತೆ  ಇರಲಿ, ಸಾಧ್ಯವಾದಷ್ಟೂ ನೆರಳಿನಲ್ಲಿ  ಇದ್ದರೆ ಒಳ್ಳೆಯದು.

ಕೆಲವು ದಿಮ್ಮಿಗಳನ್ನು ಮರಗಳ ಸಾಲುಗಳ ಮಧ್ಯೆ ಅಥವಾ ತೋಟದ ಅಂಚಿನಲ್ಲಿ ಕೊಳೆಯಲು ಬಿಡಿ. ಸಣ್ಣ ಕೊಂಬೆಗಳನ್ನು ಚೂರು ಮಾಡಿ ಒಂದೆಡೆ ರಾಶಿ ಹಾಕಿ. ಮರದ ಪುಡಿಯನ್ನು ಗೋಮಯ, ಹಸಿರು ಎಲೆಗಳು ಅಥವಾ ಇತರೆ ಸಾವಯವ ವಸ್ತುಗಳೊಂದಿಗೆ ಸೇರಿಸಿ ಕಾಂಪೋಸ್ಟ್ ಮಾಡಿದರೆ ಅತ್ಯುತ್ತಮ ಗುಣಮಟ್ಟದ ಸಾವಯವ ಗೊಬ್ಬರ ಸಿಗುತ್ತದೆ.

ಮರ ಸಂಪೂರ್ಣವಾಗಿ ಕೊಳೆಯಲು ಎರಡು ರಿಂದ ಐದು ವರ್ಷಗಳವರೆಗೆ ಬೇಕಾಗಬಹುದು. ಆದರೆ ನಂತರ ಅದು ನೀಡುವ ಹ್ಯೂಮಸ್, ಸಾವಯವ ಕಾರ್ಬನ್ ಮತ್ತು ಜೀವಂತ ಮಣ್ಣು ಹಲವು ವರ್ಷಗಳವರೆಗೆ ಬೆಳೆಗಳಿಗೆ ಲಾಭ ತರುತ್ತದೆ.

ಹೆಚ್ಚಿನವರು ಹಣದ ಆಸೆಗೆ ಮರ ಮಾರುತ್ತಾರೆ. ಅದು ಬೇಡ. ಮರ ಮಾರುವುದು ದರಿದ್ರ. ಆ ದುಡ್ಡು ಸಹ ಹೆಚ್ಚು ಸಮಯ ಉಳಿಯುವುದಿಲ್ಲ.

ಸಮಾರೋಪ:

ಇಂದು ₹4,000ಕ್ಕೆ ಮಾರಿದ ಒಂದು ಟನ್ ಕಟ್ಟಿಗೆಯ ಮೌಲ್ಯ ಕೆಲವೇ ದಿನಗಳಲ್ಲಿ ಮುಗಿಯುತ್ತದೆ. ಆದರೆ ಅದೇ ಮರವನ್ನು ಮಣ್ಣಿಗೆ ಹಿಂದಿರುಗಿಸಿದರೆ ಅದು ಹಲವು ವರ್ಷಗಳವರೆಗೆ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಿ, ನೀರನ್ನು ಸಂಗ್ರಹಿಸಿ, ಸೂಕ್ಷ್ಮಜೀವಿಗಳನ್ನು ಬೆಳೆಸಿ, ಉತ್ತಮ ಇಳುವರಿಗೆ ಭದ್ರ ಅಡಿಪಾಯವಾಗುತ್ತದೆ.

ಪ್ರಕೃತಿ ಎಂದಿಗೂ ಕೊಳೆತ ಮರವನ್ನು ಕಸವೆಂದು ಪರಿಗಣಿಸುವುದಿಲ್ಲ. ಅದನ್ನು ಹ್ಯೂಮಸ್ ಆಗಿ ಪರಿವರ್ತಿಸಿ ಹೊಸ ಮಣ್ಣನ್ನು ನಿರ್ಮಿಸುತ್ತದೆ. ಆದ್ದರಿಂದ ರೈತರೇ, ಮರವನ್ನು ಕಟ್ಟಿಗೆಯಾಗಿ ನೋಡುವ ಬದಲು ಮಣ್ಣಿನ ಖಜಾನೆಯಾಗಿ ನೋಡಿ. ನೀವು ಮಣ್ಣಿಗೆ ನೀಡುವ ಕೊಳೆತ ಮರವೇ ಮುಂದಿನ ಪೀಳಿಗೆಯ ಫಲವತ್ತಾದ ಕೃಷಿಭೂಮಿಯನ್ನು ನಿರ್ಮಿಸುತ್ತದೆ.

Leave a Reply

Your email address will not be published. Required fields are marked *

error: Content is protected !!