ಇತ್ತೀಚಿನ ದಿನಗಳಲ್ಲಿ “ರಸ ಗೊಬ್ಬರಗಳು ಮಣ್ಣನ್ನು ಹಾಳು ಮಾಡುತ್ತವೆ, ಸಾವಯವ ಗೊಬ್ಬರಗಳೇ ಮಣ್ಣಿಗೆ ಒಳ್ಳೆಯದು” ಎಂಬ ಮಾತುಗಳನ್ನು ನಾವು ಹೆಚ್ಚಾಗಿ ಕೇಳುತ್ತೇವೆ. ಈ ಅಭಿಪ್ರಾಯದಲ್ಲಿ ಸ್ವಲ್ಪ ಸತ್ಯವಿದ್ದರೂ, ಸಂಪೂರ್ಣ ಸತ್ಯವಲ್ಲ. ಮಣ್ಣಿನ ಆರೋಗ್ಯವು ಗೊಬ್ಬರದ ಪ್ರಕಾರದಿಂದ ಮಾತ್ರ ನಿರ್ಧಾರವಾಗುವುದಿಲ್ಲ. ಅದನ್ನು ಎಷ್ಟು ಪ್ರಮಾಣದಲ್ಲಿ, ಯಾವ ಸಮಯದಲ್ಲಿ ಮತ್ತು ಯಾವ ವಿಧಾನದಲ್ಲಿ ಬಳಸಲಾಗುತ್ತದೆ ಎಂಬುದೇ ಮುಖ್ಯವಾಗಿದೆ. ವೈಜ್ಞಾನಿಕವಾಗಿ ಗೊಬ್ಬರಗಳನ್ನು ಬಳಸಿದರೆ ಮಣ್ಣಿನ ಫಲವತ್ತತೆಯನ್ನು ದೀರ್ಘಕಾಲ ಕಾಪಾಡಿಕೊಳ್ಳಬಹುದು.
ರಾಸಾಯನಿಕ/ರಸ ಗೊಬ್ಬರಗಳ ಮೂಲವೂ ಪ್ರಕೃತಿಯೇ
ರಸ ಗೊಬ್ಬರಗಳನ್ನು ಅನೇಕರು ಕೃತಕ ಉತ್ಪನ್ನವೆಂದು ಭಾವಿಸುತ್ತಾರೆ. ಆದರೆ ಅವುಗಳಲ್ಲಿರುವ ಪೋಷಕಾಂಶಗಳ ಮೂಲ ಪ್ರಕೃತಿಯೇ.
ರಾಸಾಯನಿಕ ಗೊಬ್ಬರ ಎಂಬ ಹೆಸರೇ ಒಂದು ರೀತಿಯಲ್ಲಿ ತಪ್ಪು ಎನ್ನಬಹುದು. ನಿಜವಾಗಿ ಅದು ರಸ ಗೊಬ್ಬರ. ಯಾಕೆಂದರೆ ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪೋಷಕಾಂಶಗಳು ಅಡಕವಾಗಿರುತ್ತದೆ. ಹಾಗಾಗಿ ಅದನ್ನು ರಸ ಗೊಬ್ಬರ ಎಂದು ಹೇಳುವುದೇ ಸೂಕ್ತ. ಇವು ತೀಕ್ಷ್ಣ ಗೊಬ್ಬರಗಳು. ನೈಸರ್ಗಿಕ ಮೂಲದ ಪೊಷಕಗಳನ್ನು ರಾಸಾಯನಿಕವಾಗಿ ಶುದ್ಧಿಕರಣ ಹಾಗೂ ರೂಪಂತರ ಮಾಡಲಾಗುತ್ತದೆ ಅಷ್ಟೇ. ಅದು ಮಣ್ಣನ್ನು ಹಾಳುಮಾಡುತ್ತದೆ ಎಂಬುದು ಒಂದು ಪ್ರಚಾರ (propaganda) ಅಷ್ಟೇ. ಮಣ್ಣು ಎಂಬುದು ಪ್ರಕೃತಿಯ ಸೃಷ್ಟಿ. ಇದನ್ನು ಹಾಳುಮಾಡುವಷ್ಟು ಪ್ರಮಾಣದಲ್ಲಿ ರಸಗೊಬ್ಬರ ಬಳಸಿದರೆ ಕೃಷಿಕನಿಗೆ ಬೇಸಾಯ ಲಾಭದಾಯಕವಾಗಲಾರದು.
ಯೂರಿಯಾದಲ್ಲಿರುವ ಸಾರಜನಕ (ನೈಟ್ರೋಜನ್) ವಾತಾವರಣದಲ್ಲಿರುವ ನೈಟ್ರೋಜನ್ನಿಂದ ಕೈಗಾರಿಕಾ ತಂತ್ರಜ್ಞಾನದ ಮೂಲಕ ತಯಾರಿಸಲಾಗುತ್ತದೆ.
ಫಾಸ್ಫರಸ್ ಗೊಬ್ಬರಗಳು ಭೂಮಿಯೊಳಗಿರುವ ಫಾಸ್ಫೇಟ್ ಶಿಲೆಗಳಿಂದ ಉತ್ಪಾದನೆಯಾಗುತ್ತವೆ.
ಪೊಟ್ಯಾಶ್ ಗೊಬ್ಬರಗಳು ಲಕ್ಷಾಂತರ ವರ್ಷಗಳ ಹಿಂದೆ ರೂಪುಗೊಂಡ ಸಮುದ್ರದ ಉಪ್ಪಿನ ಖನಿಜ ನಿಕ್ಷೇಪಗಳಿಂದ ದೊರೆಯುತ್ತವೆ.
ಅಂದರೆ ಸಸ್ಯಗಳಿಗೆ ದೊರೆಯುವ ನೈಟ್ರೋಜನ್, ಫಾಸ್ಫರಸ್ ಮತ್ತು ಪೊಟ್ಯಾಶಿಯಂ ಪ್ರಕೃತಿಯಿಂದಲೇ ಬಂದ ಪೋಷಕಾಂಶಗಳು. ವ್ಯತ್ಯಾಸವೆಂದರೆ ಇವು ಗಿಡಗಳಿಗೆ ಸುಲಭವಾಗಿ ಲಭ್ಯವಾಗುವ ಸಾಂದ್ರ ರೂಪದಲ್ಲಿ ನೀಡಲಾಗುತ್ತದೆ.
ರೈತರು ನಿಜವಾಗಿಯೂ ಹೆಚ್ಚು ಗೊಬ್ಬರ ಬಳಸುತ್ತಾರೆಯೇ?
ಸಾಮಾನ್ಯವಾಗಿ ರೈತರು ಗೊಬ್ಬರಗಳನ್ನು ಅತಿಯಾಗಿ ಬಳಸುತ್ತಿದ್ದಾರೆ ಎಂಬ ಅಭಿಪ್ರಾಯ ಇದೆ. ಆದರೆ ಭಾರತದ ಬಹುತೇಕ ರೈತರ ಪರಿಸ್ಥಿತಿ ಬೇರೆ. ಗೊಬ್ಬರಗಳು ದುಬಾರಿಯಾಗಿರುವುದರಿಂದ ಹಾಗೂ ಎಲ್ಲ ಸಮಯದಲ್ಲೂ ಸುಲಭವಾಗಿ ದೊರೆಯದ ಕಾರಣ, ಹೆಚ್ಚಿನ ರೈತರು ಶಿಫಾರಸು ಮಾಡಿದ ಪ್ರಮಾಣಕ್ಕಿಂತಲೂ ಕಡಿಮೆ ಪ್ರಮಾಣದಲ್ಲಿಯೇ ಬಳಸುತ್ತಾರೆ.
ಉದಾಹರಣೆಗೆ, ಒಂದು ಎಕರೆಗೆ 100 ಕೆ.ಜಿ. ಯೂರಿಯಾ ಶಿಫಾರಸು ಮಾಡಿದರೂ, ಅದು ಒಂದು ಚದರ ಅಡಿಗೆ ಸುಮಾರು 2 ರಿಂದ 2.5 ಗ್ರಾಂ ಮಾತ್ರ ಬರುತ್ತದೆ. ಫಾಸ್ಫೇಟ್ ಮತ್ತು ಪೊಟ್ಯಾಶ್ ಗೊಬ್ಬರಗಳ ಪ್ರಮಾಣವೂ ಇದೇ ರೀತಿಯಲ್ಲಿ ಬಹಳ ಕಡಿಮೆಯೇ ಇರುತ್ತದೆ. ಆದ್ದರಿಂದ ಮಣ್ಣಿನ ಮೇಲೆ ಬೀಳುವ ಗೊಬ್ಬರದ ಪ್ರಮಾಣ ನಾವು ಊಹಿಸುವಷ್ಟು ಹೆಚ್ಚಿರುವುದಿಲ್ಲ.
ರಾಸಾಯನಿಕ ಗೊಬ್ಬರಗಳು ಮಣ್ಣಿನ ರಚನೆಯನ್ನು ಬದಲಾಯಿಸುತ್ತವೆಯೇ?
ಶಿಫಾರಸು ಮಾಡಿದ ಪ್ರಮಾಣದಲ್ಲಿ ಬಳಸಿದರೆ ರಾಸಾಯನಿಕ ಗೊಬ್ಬರಗಳು ಮಣ್ಣಿನ ರಚನೆಯನ್ನು ಶಾಶ್ವತವಾಗಿ ಹಾಳು ಮಾಡುವುದಿಲ್ಲ. ಆದರೆ ತಪ್ಪಾದ ಬಳಕೆ ಕೆಲವು ತಾತ್ಕಾಲಿಕ ಸಮಸ್ಯೆಗಳನ್ನು ಉಂಟುಮಾಡಬಹುದು.
ಉದಾಹರಣೆಗೆ, ವರ್ಷದಿಂದ ವರ್ಷಕ್ಕೆ ಯೂರಿಯಾವನ್ನೇ ಹೆಚ್ಚಾಗಿ ಬಳಸುವುದು, ರಂಜಕ ಮತ್ತು ಪೊಟ್ಯಾಶ್ ನೀಡದೇ ಇರುವುದು, ಒಂದೇ ಗೊಬ್ಬರವನ್ನು ಅವಲಂಬಿಸುವುದು, ಮಣ್ಣಿನ ಪರೀಕ್ಷೆ ಮಾಡಿಸದೇ ಗೊಬ್ಬರ ಹಾಕುವುದು ಅಥವಾ ತಪ್ಪಾದ ಸಮಯದಲ್ಲಿ ಗೊಬ್ಬರ ನೀಡುವುದು ಇಂತಹ ಕ್ರಮಗಳು ಮಣ್ಣಿನ ಪೋಷಕಾಂಶಗಳ ಸಮತೋಲನವನ್ನು ಹಾಳುಮಾಡಬಹುದು. ಪೋಷಕಾಂಶಗಳ ಅಸಮತೋಲನ ಅಥವಾ ಅಲಭ್ಯತೆ ಮುಂತಾದ ಸಮಸ್ಯೆಗಳು ಬರುವುದು ಮಣ್ಣಿನಲ್ಲಿ ಸಾವಯವ ಅಂಶದ ಕೊರತೆ ಉಂಟಾದಾಗ. ನಾವು ಬಳಕೆ ಮಾಡಿದ ರಸಗೊಬ್ಬರಗಳನ್ನು ಸಸ್ಯಗಳು ಬಳಕೆ ಮಾಡುವ ರೂಪಕ್ಕೆ ತರಬೇಕಾದರೆ ಅಲ್ಲಿ ಸೂಕ್ಷ್ಮಾಣು ಜೀವಿಗಳು ಇರಬೇಕು. ಅವು ಸಾವಯವ ಅಂಶ ಇರುವ ಮಣ್ಣಿನಲ್ಲಿ ಮಾತ್ರ ಇರುತ್ತವೆ.
ರಸ ಗೊಬ್ಬರಗಳಿಂದ ಮಣ್ಣಿನ pH, ಸೂಕ್ಷ್ಮಜೀವಿಗಳ ಚಟುವಟಿಕೆ, ಬೇರುಗಳ ಬೆಳವಣಿಗೆ ಹಾಗೂ ಪೋಷಕಾಂಶಗಳ ಲಭ್ಯತೆ ತಾತ್ಕಾಲಿಕವಾಗಿ ಬದಲಾಗಬಹುದು. ಆದರೆ ಸೂಕ್ತ ನಿರ್ವಹಣೆ ಮಾಡಿದರೆ ಈ ಸಮಸ್ಯೆಗಳನ್ನು ಸರಿಪಡಿಸಬಹುದು.
ಅತಿಯಾದ ಬಳಕೆಯಿಂದ ಉಂಟಾಗುವ ಸಮಸ್ಯೆಗಳು:
ಗೊಬ್ಬರಗಳನ್ನು ಅಗತ್ಯಕ್ಕಿಂತ ಹೆಚ್ಚು ಬಳಸಿದರೆ ಕೆಲವು ಅನಾನುಕೂಲಗಳು ಉಂಟಾಗಬಹುದು.
- ಬೇರುಗಳ ಸುತ್ತ ಉಪ್ಪಿನ ಅಂಶ ಹೆಚ್ಚಾಗುವುದು.
- ಒಂದು ಪೋಷಕಾಂಶ ಅಧಿಕವಾಗಿ ಇನ್ನೊಂದು ಪೋಷಕಾಂಶದ ಹೀರಿಕೊಳ್ಳುವಿಕೆ ಕಡಿಮೆಯಾಗುವುದು.
- ಯೂರಿಯಾದ ಸಾರಜನಕ ಗಾಳಿಗೆ ಆವಿಯಾಗಿ ಹೋಗುವುದು ಅಥವಾ ನೀರಿನಲ್ಲಿ ಕೊಚ್ಚಿಕೊಂಡು ಹೋಗುವುದು.
- ಮಣ್ಣಿನಲ್ಲಿ ಸಾವಯವ ಅಂಶ ಇಲ್ಲದ ಕಾರಣ ಗೊಬ್ಬರದ ಪರಿಣಾಮಕಾರಿತ್ವ ಕಡಿಮೆಯಾಗುವುದು.
- ಉತ್ಪಾದನಾ ವೆಚ್ಚ ಹೆಚ್ಚಾಗಿ ಇಳುವರಿ ಹೆಚ್ಚಳವಾಗದಿರುವುದು.
- ನೀರಿನ ಮಾಲಿನ್ಯಕ್ಕೆ ಕಾರಣವಾಗುವುದು.
ಈ ಸಮಸ್ಯೆಗಳು ಗೊಬ್ಬರದ ಸ್ವಭಾವದಿಂದಲ್ಲ; ಅದರ ಅಸಮತೋಲನ ಮತ್ತು ಅವೈಜ್ಞಾನಿಕ ಬಳಕೆಯಿಂದ ಉಂಟಾಗುತ್ತವೆ.
ಸಾವಯವ ಗೊಬ್ಬರಕ್ಕೂ ಮಿತಿಗಳಿವೆ:
ಕೊಟ್ಟಿಗೆ ಗೊಬ್ಬರ, ಕಾಂಪೋಸ್ಟ್, ಹಸಿರು ಗೊಬ್ಬರ, ಎರೆಹುಳು ಗೊಬ್ಬರ ಮುಂತಾದ ಸಾವಯವ ಗೊಬ್ಬರಗಳು ಮಣ್ಣಿನ ಸಾವಯವ ಪದಾರ್ಥವನ್ನು ಹೆಚ್ಚಿಸುತ್ತವೆ. ಅವು ಮಣ್ಣಿನ ರಚನೆಯನ್ನು ಸುಧಾರಿಸುತ್ತವೆ, ನೀರು ಹಿಡಿದಿಡುವ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ ಹಾಗೂ ಉಪಯುಕ್ತ ಸೂಕ್ಷ್ಮಜೀವಿಗಳ ಬೆಳವಣಿಗೆಗೆ ಸಹಾಯ ಮಾಡುತ್ತವೆ.
ಆದರೆ ಇವುಗಳಲ್ಲಿ ಪೋಷಕಾಂಶಗಳ ಪ್ರಮಾಣ ಕಡಿಮೆ ಹಾಗೂ ಸ್ಥಿರವಾಗಿರುವುದಿಲ್ಲ. ಅಧಿಕ ಇಳುವರಿ ನೀಡುವ ಬೆಳೆಗಳಿಗೆ ಬೇಕಾದ ಎಲ್ಲಾ ಪೋಷಕಾಂಶಗಳನ್ನು ಸಾವಯವ ಗೊಬ್ಬರಗಳಿಂದ ಮಾತ್ರ ಪೂರೈಸುವುದು ಬಹುತೇಕ ಸಂದರ್ಭಗಳಲ್ಲಿ ಸಾಧ್ಯವಾಗುವುದಿಲ್ಲ. ಆದ್ದರಿಂದ ಸಾವಯವ ಗೊಬ್ಬರ ಮತ್ತು ರಾಸಾಯನಿಕ ಗೊಬ್ಬರ ಎರಡನ್ನೂ ಸಮತೋಲನವಾಗಿ ಬಳಸುವುದು ಉತ್ತಮ. ಸಾವಯವ ಮೂಲದ ಗೊಬ್ಬರ ಸರಿಯಾಗಿ ಡಿ ಕಂಪೋಸ್ ಆಗದ ಸ್ಥಿತಿಯಲ್ಲಿ ಮಣ್ಣಿಗೆ ಸೇರಿಸಿದಾಗ ಅಲ್ಲಿ ಅದು ಕಳಿಯುವ ಕ್ರಿಯೆ ನಡೆಯುವಾಗ ಸಸ್ಯ ಬೇರುಗಳಿಗೆ ಹಾನಿಯಾಗುವುದೂ ಇದೆ.
ಮಣ್ಣಿನ ಹಾನಿ ಶಾಶ್ವತವೇ ಅಥವಾ ತಾತ್ಕಾಲಿಕವೇ?
ವೈಜ್ಞಾನಿಕ ಅಧ್ಯಯನಗಳ ಪ್ರಕಾರ, ತಪ್ಪಾದ ಗೊಬ್ಬರ ಬಳಕೆಯಿಂದ ಉಂಟಾಗುವ ಹೆಚ್ಚಿನ ಸಮಸ್ಯೆಗಳು ಶಾಶ್ವತವಲ್ಲ; ತಾತ್ಕಾಲಿಕವಾಗಿರುತ್ತವೆ. ಮಣ್ಣು ಒಂದು ಜೀವಂತ ವ್ಯವಸ್ಥೆಯಾಗಿದ್ದು, ಸರಿಯಾದ ನಿರ್ವಹಣೆ ಮಾಡಿದರೆ ಮತ್ತೆ ತನ್ನ ಫಲವತ್ತತೆಯನ್ನು ಪಡೆಯುವ ಸಾಮರ್ಥ್ಯ ಹೊಂದಿದೆ.
ಮಣ್ಣಿನ ಪರೀಕ್ಷೆ ಆಧರಿಸಿ ಗೊಬ್ಬರ ಬಳಕೆ, ಸಾವಯವ ಗೊಬ್ಬರ ಸೇರಿಸುವುದು, ಬೆಳೆ ಪರಿವರ್ತನೆ, ಅಗತ್ಯವಿದ್ದರೆ ಸುಣ್ಣ ಬಳಕೆ ಹಾಗೂ ಸಮತೋಲಿತ ಪೋಷಕಾಂಶ ನಿರ್ವಹಣೆ ಮಾಡಿದರೆ ಮಣ್ಣಿನ ಆರೋಗ್ಯ ಮತ್ತೆ ಉತ್ತಮವಾಗುತ್ತದೆ.
ಸಮಗ್ರ ಪೋಷಕಾಂಶ ನಿರ್ವಹಣೆಯೇ ಉತ್ತಮ ಮಾರ್ಗ;
ಇಂದಿನ ಕೃಷಿ ವಿಜ್ಞಾನವು “ರಾಸಾಯನಿಕ ಗೊಬ್ಬರ ಅಥವಾ ಸಾವಯವ ಗೊಬ್ಬರ” ಎಂಬ ಆಯ್ಕೆಯನ್ನು ನೀಡುವುದಿಲ್ಲ. ಬದಲಿಗೆ ಎರಡನ್ನೂ ಸಮತೋಲನವಾಗಿ ಬಳಸುವ ಸಮಗ್ರ ಪೋಷಕಾಂಶ ನಿರ್ವಹಣೆ (Integrated Nutrient Management – INM) ಯನ್ನು ಶಿಫಾರಸು ಮಾಡುತ್ತದೆ.
ಸಾವಯವ ಗೊಬ್ಬರ ಮಣ್ಣಿನ ಗುಣಮಟ್ಟವನ್ನು ಹೆಚ್ಚಿಸಿದರೆ, ರಾಸಾಯನಿಕ ಗೊಬ್ಬರ ಬೆಳೆಗಳಿಗೆ ತಕ್ಷಣ ಅಗತ್ಯವಾಗಿರುವ ಪೋಷಕಾಂಶಗಳನ್ನು ಒದಗಿಸುತ್ತದೆ. ಇವೆರಡೂ ಪರಸ್ಪರ ಪೂರಕವಾಗಿದ್ದು, ಸುಸ್ಥಿರ ಕೃಷಿಗೆ ಅವಶ್ಯಕವಾಗಿವೆ.
ರಸ ಗೊಬ್ಬರಗಳು ಮಣ್ಣಿನ ಶತ್ರುಗಳಲ್ಲ; ಸಾವಯವ ಗೊಬ್ಬರಗಳು ಮಾತ್ರವೇ ಪರಿಹಾರವೂ ಅಲ್ಲ. ಮಣ್ಣಿನ ಆರೋಗ್ಯವನ್ನು ಕಾಪಾಡುವುದು ಗೊಬ್ಬರದ ಹೆಸರಿನಿಂದ ಅಲ್ಲ, ಅದರ ವೈಜ್ಞಾನಿಕ ಮತ್ತು ಸಮತೋಲಿತ ಬಳಕೆಯಿಂದ ಸಾಧ್ಯ. ಭಾರತದಂತಹ ದೇಶದಲ್ಲಿ ಹೆಚ್ಚಿನ ರೈತರು ದುಬಾರಿ ಬೆಲೆಯಿಂದ ಗೊಬ್ಬರಗಳನ್ನು ಮಿತ ಪ್ರಮಾಣದಲ್ಲಿಯೇ ಬಳಸುತ್ತಿದ್ದಾರೆ. ಆದ್ದರಿಂದ ಸಮಸ್ಯೆ ಗೊಬ್ಬರದಲ್ಲಿಲ್ಲ; ಅದರ ಅತಿಯಾದ, ಅಸಮತೋಲನದ ಅಥವಾ ತಪ್ಪಾದ ಬಳಕೆಯಲ್ಲಿದೆ. ವಿಜ್ಞಾನಾಧಾರಿತ ಗೊಬ್ಬರ ನಿರ್ವಹಣೆಯೊಂದಿಗೆ ಸಾವಯವ ಗೊಬ್ಬರಗಳನ್ನು ಸಮರ್ಪಕವಾಗಿ ಬಳಸಿದರೆ ಮಣ್ಣಿನ ಫಲವತ್ತತೆ, ಬೆಳೆ ಇಳುವರಿ ಮತ್ತು ಪರಿಸರ – ಈ ಮೂರನ್ನೂ ದೀರ್ಘಕಾಲ ಸಂರಕ್ಷಿಸಬಹುದು.
