ಪನ್ನಿಯೂರು ಶ್ರೇಣಿಯ ವಿವಿಧ ತಳಿಗಳ ಪೈಕಿ ಪನ್ನಿಯೂರು-9 ತಳಿಯ ಕರಿಮೆಣಸು, ಹವಾಮಾನದಲ್ಲಿ ವ್ಯತ್ಯಯ ಕಂಡುಬಂದಿರುವ ಈ ವರ್ಷದಂತಹ ಪರಿಸ್ಥಿತಿಯಲ್ಲಿಯೂ ಉತ್ತಮ ಇಳುವರಿ ನೀಡುವ ಸಾಮರ್ಥ್ಯ ಹೊಂದಿದೆ ಎಂದು ಕೃಷಿಕ ಜೋಸೆಫ್ ಚಾಕೋ ಅವರು ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾರೆ.
ಇತ್ತೀಚೆಗೆ ಶಿವಮೊಗ್ಗ ಜಿಲ್ಲೆಯ ರಿಪ್ಪನ್ಪೇಟೆಗೆ ಕ್ಷೇತ್ರ ಭೇಟಿಗಾಗಿ ತೆರಳಿದ ಸಂದರ್ಭದಲ್ಲಿ, ಪ್ರಗತಿಪರ ಮೆಣಸು ಬೆಳೆಗಾರರಾದ ಶ್ರೀ ಜೋಸೆಫ್ ಚಾಕೋ ಅವರ ತೋಟಕ್ಕೆ ಭೇಟಿ ನೀಡುವ ಅವಕಾಶ ದೊರೆಯಿತು.
ಸಿಲ್ವರ್ ಓಕ್ ಮರಗಳನ್ನು ಆಧಾರವಾಗಿಸಿಕೊಂಡು ಮೆಣಸನ್ನು ಮುಖ್ಯ ಬೆಳೆಯಾಗಿ ಬೆಳೆಸುತ್ತಿರುವ ಅವರ ತೋಟ ಗಮನ ಸೆಳೆಯುವಂತಿತ್ತು. ವಿಶೇಷವಾಗಿ ಪನ್ನಿಯೂರು-9 ತಳಿಯ ಕಾರ್ಯಕ್ಷಮತೆ, ಆರೋಗ್ಯಕರ ನಾಟಿ ಬಳ್ಳಿ ಮತ್ತು ವೈಜ್ಞಾನಿಕ ನಿರ್ವಹಣೆಯ ಬಗ್ಗೆ ಅವರ ಅನುಭವ ಹಲವು ರೈತರಿಗೆ ಉಪಯುಕ್ತವಾಗಬಹುದು.
ರಬ್ಬರ್ ಬೆಳೆ ಬದಲಿಗೆ ಮೆಣಸಿನ ಕೃಷಿ;
ಕೇರಳದಿಂದ ಕರ್ನಾಟಕಕ್ಕೆ ಬಂದ ಜೋಸೆಫ್ ಚಾಕೋ ಅವರ ಮೂಲ ಉದ್ದೇಶ ರಬ್ಬರ್ ಕೃಷಿ ಮಾಡುವುದು. ಅದರಂತೆ ರಬ್ಬರ್ ತೋಟವನ್ನು ಬೆಳೆಸಿದರು. ಆದರೆ ಕಾಲಕ್ರಮೇಣ ರಬ್ಬರ್‌ನ ಬೆಲೆ ಕುಸಿಯತೊಡಗಿತು.
ಆಗ, “ಇದೇ ಜಮೀನಿನಲ್ಲಿ ಬೇರೆ ಯಾವ ಬೆಳೆಯಿಂದ ಉತ್ತಮ ಆದಾಯ ಪಡೆಯಬಹುದು?” ಎಂದು ಯೋಚಿಸಿದ ಅವರು ಮೆಣಸಿನ ಕೃಷಿಯತ್ತ ಗಮನ ಹರಿಸಿದರು.
ರಬ್ಬರ್ ಮರಗಳ ನಡುವೆ ಸುಮಾರು 15 × 12 ಅಡಿ ಅಂತರವಿದ್ದು, ಅದರ ನಡುವೆ ಸಿಲ್ವರ್ ಓಕ್ ಮರಗಳನ್ನು ಬೆಳೆಸಿ ಅವುಗಳನ್ನು ಮೆಣಸು ಬಳ್ಳಿಗಳಿಗೆ ಆಧಾರವಾಗಿ ಬಳಸಿದರು. ಸಿಲ್ವರ್ ಓಕ್ ಮರದ ಕಾಂಡದ ರಚನೆ ಮೆಣಸಿನ ಬಳ್ಳಿ ಹಬ್ಬಲು ಉತ್ತಮ. ಹಾಗೆಯೇ ಇದರ ಗೆಲ್ಲಿನ ಕ್ರಮವೂ ಬಳ್ಳಿ ಜಾರದಂತೆ ತಡೆಯುವಲ್ಲಿ ಸಹಕಾರಿ.
ಹೀಗೆ ಆರಂಭವಾದ ಮೆಣಸಿನ ಕೃಷಿ ಇಂದು ಅವರ ತೋಟದ ಪ್ರಮುಖ ಬೆಳೆಯಾಗಿ ರೂಪುಗೊಂಡಿದೆ.
ಪನ್ನಿಯೂರು-5ರಿಂದ ಪನ್ನಿಯೂರು-9 ರತ್ತ ;
ಆರಂಭದಲ್ಲಿ ಜೋಸೆಫ್ ಚಾಕೋ ಅವರು ಪನ್ನಿಯೂರು-5 ತಳಿಯನ್ನು ನಾಟಿ ಮಾಡಿದರು. ನಾಲ್ಕೈದು ವರ್ಷಗಳ ಕಾಲ ಅದರ ಬೆಳವಣಿಗೆ ಮತ್ತು ಇಳುವರಿಯನ್ನು ಗಮನಿಸಿದ ನಂತರ, ಕೆಲವು ಸಂದರ್ಭಗಳಲ್ಲಿ ಇಳುವರಿಯಲ್ಲಿ ವ್ಯತ್ಯಾಸ ಕಂಡುಬಂದಿತು.
ರೈತನಿಗೆ ತನ್ನ ತೋಟದಲ್ಲಿ ಯಾವ ತಳಿ ಉತ್ತಮವಾಗಿ ಹೊಂದಿಕೊಳ್ಳುತ್ತದೆ ಎಂಬುದನ್ನು ತಿಳಿದುಕೊಳ್ಳಲು ಸ್ವಂತ ಅನುಭವವೇ ಅತ್ಯುತ್ತಮ ಮಾರ್ಗ.
ಈ ಅನುಭವದ ಆಧಾರದ ಮೇಲೆ ಅವರು ನಂತರ ಪನ್ನಿಯೂರು-9 ಮತ್ತು ಪನ್ನಿಯೂರು-2 ಸೇರಿದಂತೆ ಇತರ ತಳಿಗಳನ್ನೂ ನಾಟಿ ಮಾಡಿದರು.
ಇಂದು, ಇವುಗಳಲ್ಲಿ ವಿಶೇಷವಾಗಿ ಪನ್ನಿಯೂರು-9 ತಳಿಯ ಬಗ್ಗೆ ಅವರು ಹೆಚ್ಚಿನ ವಿಶ್ವಾಸ ಹೊಂದಿದ್ದಾರೆ.
ಪನ್ನಿಯೂರು-9 ಏಕೆ ಇಷ್ಟವಾಯಿತು?
ಈ ವರ್ಷ ಮಳೆಯ ಪ್ರಮಾಣ ಕಡಿಮೆಯಿದ್ದರೂ, ಪನ್ನಿಯೂರು-9 ತಳಿ ಉತ್ತಮವಾಗಿ ಕಾರ್ಯನಿರ್ವಹಿಸಿರುವುದು ಜೋಸೆಫ್ ಚಾಕೋ ಅವರ ಗಮನ ಸೆಳೆದಿದೆ.
ಅವರ ಅನುಭವದ ಪ್ರಕಾರ, ಪನ್ನಿಯೂರು-9ರಲ್ಲಿ ನಿರಂತರ ಇಳುವರಿ, ಉತ್ತಮ ಕರೆ (Spike)ಗಳ ರಚನೆ ಮತ್ತು ಉತ್ತಮ ಕಾಳಿನ ತೂಕ ಕಂಡುಬರುತ್ತಿದೆ.
ಸಾಮಾನ್ಯವಾಗಿ ಕೆಲವು ಪನ್ನಿಯೂರು ತಳಿಗಳಲ್ಲಿ ಒಂದು ಗಂಟಿನಲ್ಲಿ ಸುಮಾರು ಮೂರು ಕರೆ ಗಳು ಕಂಡುಬರುವ ಸಂದರ್ಭವಿದ್ದರೆ, ಪನ್ನಿಯೂರು-9ರಲ್ಲಿ ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಸ್ಪೈಕ್ಗಳು ಕಂಡುಬರುವುದನ್ನು ಅವರು ಗಮನಿಸಿದ್ದಾರೆ.
ಸ್ಪೈಕ್‌ನ ಉದ್ದವೂ ಉತ್ತಮವಾಗಿದ್ದು, ಕಾಳುಗಳ ತೂಕವೂ ಅವರಿಗೆ ತೃಪ್ತಿ ನೀಡಿದೆ.
ಲೀಟರ್ ತೂಕ ಮೆಣಸಿನ ಗುಣಮಟ್ಟಡ ಒಂದು ಮಾನದಂಡ:
ಮೆಣಸಿನ ಗುಣಮಟ್ಟವನ್ನು ಗಮನಿಸಲು ಬಳಸುವ ಒಂದು ಸರಳ ವಿಧಾನವೆಂದರೆ ಒಂದು ಲೀಟರ್ ಪಾತ್ರೆಯಲ್ಲಿ ಹಾಕಿ ಅದರ ತೂಕವನ್ನು ನೋಡುವುದು. ಅದನ್ನು ಲೀಟರ್ ವೈಟ್ ಎನ್ನಲಾಗುತ್ತದೆ.
ಅವರ ಅನುಭವದ ಪ್ರಕಾರ, ಉತ್ತಮವಾಗಿ ಬಲಿತ, ದಪ್ಪವಾದ ಕಾಳುಗಳಿದ್ದ ಮೆಣಸಿನ ಒಂದು ಲೀಟರ್ ಸುಮಾರು 500–550 ಗ್ರಾಂ ಅಥವಾ ಅದಕ್ಕಿಂತ ಹೆಚ್ಚಿನ ತೂಕ ಹೊಂದಿರಬೇಕು.
500 ಗ್ರಾಂಗಿಂತ ಕಡಿಮೆ ತೂಕ ಬಂದರೆ ಕಾಳುಗಳು ಹಗುರವಾಗಿದ್ದು, ಪೂರ್ಣವಾಗಿ ಬಲಿತಿಲ್ಲದಿರುವ ಸಾಧ್ಯತೆ ಇರುತ್ತದೆ.
ಅವರ ತೋಟದಲ್ಲಿ ಪನ್ನಿಯೂರು-9 ಮೆಣಸಿನ ತೂಕ ಸಾಮಾನ್ಯವಾಗಿ 550 ಗ್ರಾಂಗಿಂತಲೂ ಹೆಚ್ಚಾಗಿರುವುದು ಕಂಡುಬಂದಿದೆ. ಇದೇ ಕಾರಣದಿಂದ ಈ ತಳಿಯ ಬಗ್ಗೆ ಅವರಿಗೆ ಉತ್ತಮ ಅಭಿಪ್ರಾಯ ಮೂಡಿದೆ.
ಟಾಪ್ ಶೂಟ್ – ನಾಟಿ ಮಾಡುವ ವಿಧಾನದಲ್ಲೂ ವಿಶೇಷತೆ:
ಜೋಸೆಫ್ ಚಾಕೋ ಅವರ ತೋಟದ ಮತ್ತೊಂದು ಪ್ರಮುಖ ಅಂಶವೆಂದರೆ ಅವರು ಟಾಪ್ ಶೂಟ್ ಅಥವಾ ಆರ್ಥೋಟ್ರೋಪಿಕ್ ಶೂಟ್ಗಳನ್ನು ನೆಡು ಸಾಮಾಗ್ರಿಯಾಗಿ ಬಳಸುತ್ತಿದ್ದಾರೆ.
ಮೆಣಸು ಬಳ್ಳಿಯಲ್ಲಿ ಸಾಮಾನ್ಯವಾಗಿ ಮೂರು ವಿಧದ ಚಿಗುರುಗಳನ್ನು ಗಮನಿಸಬಹುದು:
1. ಸರ್ಫೇಸ್ ರನ್ನರ್ಗಳು:
ನೆಲದ ಮೇಲೆ ಹರಡುವ ಚಿಗುರುಗಳು. ಸಾಮಾನ್ಯವಾಗಿ ನರ್ಸರಿಗಳಲ್ಲಿ ಮತ್ತು ನಾಟಿಗಾಗಿ ಇವುಗಳನ್ನು ಬಳಸಲಾಗುತ್ತದೆ.
2. ಕ್ಲೈಂಬಿಂಗ್ ಅಥವಾ ಆರ್ಥೋಟ್ರೋಪಿಕ್ ಶೂಟ್ಗಳು:
ಆಧಾರ ಮರವನ್ನು ಆಶ್ರಯಿಸಿಕೊಂಡು ಮೇಲಕ್ಕೆ ಬೆಳೆಯುವ ಚಿಗುರುಗಳು.
3. ಏರಿಯಲ್ ಶೂಟ್ಗಳು:
ಮೇಲಕ್ಕೆ ಬೆಳೆಯುವ ಚಿಗುರುಗಳಿಂದ ಹೊರಹೊಮ್ಮುವ ಶಾಖೆಗಳು. ಇವುಗಳಲ್ಲಿ ಹೂ ಬಿಡುವ ಸಾಮರ್ಥ್ಯ ಹೆಚ್ಚು.
ಜೋಸೆಫ್ ಚಾಕೋ ಅವರು ಟಾಪ್ ಶೂಟ್ ಅಥವಾ ಆರ್ಥೋಟ್ರೋಪಿಕ್ ಶೂಟ್ ಬಳಕೆಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ.
ಇಂತಹ ನಾಟಿ ವಸ್ತುವಿನಲ್ಲಿ ಈಗಾಗಲೇ ಮೇಲಕ್ಕೆ ಬೆಳೆಯುವ ಬಳ್ಳಿಯ ಗುಣಲಕ್ಷಣಗಳಿರುವುದರಿಂದ, ಸೂಕ್ತ ಪರಿಸ್ಥಿತಿಯಲ್ಲಿ ಮುಂದಿನ ವರ್ಷವೇ ಇಳುವರಿ ಆರಂಭಿಸುವ ಸಾಧ್ಯತೆ ಇರುತ್ತದೆ.
ಇದರ ಮತ್ತೊಂದು ಪ್ರಮುಖ ಪ್ರಯೋಜನವೆಂದರೆ ಆರೋಗ್ಯಕರ ತಾಯಿಬಳ್ಳಿಯಿಂದ ಆಯ್ಕೆ ಮಾಡಿದ ರೋಗಮುಕ್ತ ನಾಟಿ ವಸ್ತುವನ್ನು ಬಳಸುವುದರಿಂದ ರೋಗದ ಅಪಾಯವನ್ನು ಕಡಿಮೆ ಮಾಡಬಹುದು.
ನೆಲದ ಸಂಪರ್ಕದಲ್ಲಿರುವ ಸರ್ಫೇಸ್ ರನ್ನರ್‌ಗಳಿಗೆ ಮಣ್ಣಿನಲ್ಲಿರುವ ರೋಗಕಾರಕಗಳ ಸಂಪರ್ಕ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಆರೋಗ್ಯಕರ ನಾಟಿ ವಸ್ತು ಆಯ್ಕೆ ಮಾಡುವುದು ಅತ್ಯಂತ ಮುಖ್ಯ.
“ಮೆಣಸಿನ ಬೇರುಗಳಿಗೆ ಉಸಿರಾಡಲು ಜಾಗ ಬೇಕು”
ಜೋಸೆಫ್ ಚಾಕೋ ಅವರ ಅನುಭವದಿಂದ ತಿಳಿದುಬರುವ ಮತ್ತೊಂದು ಪ್ರಮುಖ ವಿಷಯವೆಂದರೆ ಮೆಣಸು ಬೆಳೆಯಲ್ಲಿ ಮಣ್ಣಿನ ಗಾಳಿಯಾಡುವಿಕೆ ಮತ್ತು ನೀರು ಹರಿದುಹೋಗುವ ವ್ಯವಸ್ಥೆ ಬಹಳ ಮುಖ್ಯ.
ಮೆಣಸಿಗೆ ಸೂಕ್ಷ್ಮವಾದ ಬೇರು ವ್ಯವಸ್ಥೆಯಿದ್ದು, ಮಳೆಗಾಲದಲ್ಲಿ ಫೈಟೊಫ್ತೋರಾ ಮುಂತಾದ ಶಿಲೀಂಧ್ರ ರೋಗಗಳಿಗೆ ಇದು ಹೆಚ್ಚು ಒಳಗಾಗಬಹುದು.
ಮಣ್ಣಿನಲ್ಲಿ ನೀರು ನಿಂತು ಗಾಳಿಯಾಡುವಿಕೆ ಕಡಿಮೆಯಾದರೆ, ರೋಗಕಾರಕಗಳ ಬೆಳವಣಿಗೆಗೆ ಅನುಕೂಲಕರ ವಾತಾವರಣ ನಿರ್ಮಾಣವಾಗುತ್ತದೆ.
ಆದ್ದರಿಂದ ಮೆಣಸು ಕೃಷಿಯಲ್ಲಿ ಮೊದಲ ಆದ್ಯತೆ ಸರಿಯಾದ ಭೂಮಿಯ ಸಿದ್ಧತೆ ಮತ್ತು ಉತ್ತಮ ಬಸಿಗಾಲುವೆ ವ್ಯವಸ್ಥೆಗೆ ಇರಬೇಕು.
ಬಳ್ಳಿಯ ಬುಡದಲ್ಲಿ ನೀರು ನಿಲ್ಲಬಾರದು:
ಮೆಣಸು ಬಳ್ಳಿಯ ಬುಡದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳುವುದು ಅತ್ಯಂತ ಮುಖ್ಯ.
ತೋಟದಲ್ಲಿ ಸೂಕ್ತ ಇಳಿಜಾರು ಇದ್ದು, ಮಳೆ ನೀರು ತಕ್ಷಣವೇ ಹೊರಹೋಗುವಂತಿರಬೇಕು. ನೀರು ನಿಲ್ಲದಂತೆ ಉತ್ತಮ ಚರಂಡಿ ವ್ಯವಸ್ಥೆ ಮಾಡಬೇಕು.
ವಿಶೇಷವಾಗಿ ಮಲೆನಾಡಿನಲ್ಲಿ ನಿರಂತರ ಮಳೆಯ ಸಂದರ್ಭದಲ್ಲಿ ಇದು ಇನ್ನಷ್ಟು ಮಹತ್ವ ಪಡೆಯುತ್ತದೆ.
“ಮೆಣಸು ಬೆಳೆಯಲ್ಲಿ ರೋಗ ಬಂದ ನಂತರ ಚಿಕಿತ್ಸೆ ನೀಡುವುದಕ್ಕಿಂತ, ರೋಗ ಬರುವ ಪರಿಸ್ಥಿತಿಯನ್ನೇ ತಡೆಯುವುದು ಉತ್ತಮ.”
ತಡೆಗಟ್ಟುವ ಕ್ರಮಗಳಿಗೆ ಆದ್ಯತೆ
ಜೋಸೆಫ್ ಚಾಕೋ ಅವರು ತಮ್ಮ ತೋಟದಲ್ಲಿ ರೋಗ ನಿರ್ವಹಣೆಗೆ ಮುನ್ನೆಚ್ಚರಿಕೆ ಕ್ರಮಗಳಿಗೆ ಆದ್ಯತೆ ನೀಡುತ್ತಾರೆ.
ಅವರ ಕೃಷಿ ಪದ್ಧತಿಯಲ್ಲಿ 1% ಬೋರ್ಡೋ ಮಿಶ್ರಣ ಸಿಂಪಡಣೆ, ಅಗತ್ಯವಿದ್ದಲ್ಲಿ ತಾಮ್ರ ಆಧಾರಿತ ಶಿಲೀಂಧ್ರನಾಶಕದಿಂದ ಬುಡಕ್ಕೆ ಚಿಕಿತ್ಸೆ, ಸೂಕ್ಷ್ಮ ಪೋಷಕಾಂಶಗಳ ಬಳಕೆ ಹಾಗೂ ಗೊಬ್ಬರವನ್ನು ಕಂತುಗಳಲ್ಲಿ ನೀಡುವುದು ಮುಂತಾದ ಕ್ರಮಗಳಿಗೆ ಮಹತ್ವವಿದೆ.
ಒಂದೇ ಬಾರಿ ಹೆಚ್ಚಿನ ಪ್ರಮಾಣದ ಗೊಬ್ಬರ ನೀಡುವ ಬದಲು, ಬೆಳೆಯ ಅವಶ್ಯಕತೆಗೆ ಅನುಗುಣವಾಗಿ ವಿಭಜಿತ ಪ್ರಮಾಣದಲ್ಲಿ ಗೊಬ್ಬರ ನೀಡುವುದು ಪೋಷಕಾಂಶಗಳ ಬಳಕೆಗೆ ಸಹಕಾರಿಯಾಗುತ್ತದೆ.
ಮೂರನೇ ವರ್ಷದಲ್ಲೇ 4–5 ಕೆ.ಜಿ. ಒಣ ಮೆಣಸು!
ಜೋಸೆಫ್ ಚಾಕೋ ಅವರ ಕೃಷಿ ಪದ್ಧತಿಯಲ್ಲಿ ಮೂರನೇ ವರ್ಷದ ಬಳ್ಳಿಯಿಂದ ಸುಮಾರು 4–5 ಕೆ.ಜಿ. ಒಣ ಮೆಣಸು ಪಡೆಯುತ್ತಿರುವುದಾಗಿ ಅವರು ತಮ್ಮ ಅನುಭವವನ್ನು ಹಂಚಿಕೊಂಡರು.
ಆದರೆ ಇಂತಹ ಇಳುವರಿ ಎಲ್ಲ ರೈತರಿಗೂ ಖಚಿತ ಎಂದು ಹೇಳಲು ಸಾಧ್ಯವಿಲ್ಲ. ಮಣ್ಣು, ಮಳೆ, ತಳಿ, ಆಧಾರ ಮರ, ನಾಟಿ ವಸ್ತು, ರೋಗ ನಿರ್ವಹಣೆ ಮತ್ತು ಪೋಷಕಾಂಶ ನಿರ್ವಹಣೆ ಮುಂತಾದ ಹಲವು ಅಂಶಗಳು ಇಳುವರಿಯನ್ನು ನಿರ್ಧರಿಸುತ್ತವೆ.
ಆದರೂ, ಅವರ ತೋಟವು ಸರಿಯಾದ ತಳಿ + ಆರೋಗ್ಯಕರ ನಾಟಿ ವಸ್ತು + ಉತ್ತಮ ನೀರು ಹರಿವು + ಸಮತೋಲಿತ ಪೋಷಕಾಂಶ + ರೋಗ ನಿರ್ವಹಣೆ ಇವುಗಳ ಸಂಯೋಜನೆಯಿಂದ ಉತ್ತಮ ಫಲಿತಾಂಶ ಪಡೆಯಬಹುದು ಎಂಬುದಕ್ಕೆ ಒಂದು ಉತ್ತಮ ಕ್ಷೇತ್ರ ಉದಾಹರಣೆಯಾಗಿದೆ.
ಮಲೆನಾಡಿನಲ್ಲಿ ಮೆಣಸಿಗೆ ಉತ್ತಮ ಅವಕಾಶ:
ಮಲೆನಾಡಿನ ಹವಾಮಾನವು ಸಾಂಪ್ರದಾಯಿಕವಾಗಿ ಮೆಣಸು ಬೆಳೆಗೆ ಸೂಕ್ತವಾಗಿದೆ. ಮಳೆ, ತೇವಾಂಶ ಮತ್ತು ಹವಾಮಾನ ಪರಿಸ್ಥಿತಿಗಳು ಮೆಣಸಿನ ಬೆಳವಣಿಗೆಗೆ ಅನುಕೂಲಕರವಾಗಿವೆ.
ಆದರೆ ಹವಾಮಾನ ಅನುಕೂಲಕರವಾಗಿದೆ ಎಂಬ ಕಾರಣಕ್ಕೆ ಮಾತ್ರ ಉತ್ತಮ ಇಳುವರಿ ದೊರೆಯುವುದಿಲ್ಲ.
ಹೆಚ್ಚಿನ ತೇವಾಂಶ, ನೀರು ನಿಲ್ಲುವಿಕೆ, ಮಣ್ಣಿನ ಗಾಳಿಯಾಡುವಿಕೆ ಕಡಿಮೆಯಾಗುವುದು ಮತ್ತು ಫೈಟೊಫ್ತೋರಾ ರೋಗ ಮುಂತಾದ ಸಮಸ್ಯೆಗಳನ್ನು ರೈತರು ಸೂಕ್ತವಾಗಿ ನಿರ್ವಹಿಸಬೇಕಾಗಿದೆ.
ಜೋಸೆಫ್ ಚಾಕೋ ಅವರ ತೋಟ ಹೇಳುವ ಪಾಠ:
ಜೋಸೆಫ್ ಚಾಕೋ ಅವರ ತೋಟದ ವಿಶೇಷತೆ ಕೇವಲ ಪನ್ನಿಯೂರು-9 ತಳಿಯಲ್ಲ. ಜೊತೆಗೆ ಮಧ್ಯಂತರದಲ್ಲಿ ಚಂದ್ರಗಿರಿ ಕಾಫಿಯನ್ನೂ ಬೆಳೆಸಿದ್ದಾರೆ. ಇದು ಆದಾಯಕ್ಕೂ ಹಾಗೆಯೇ ಮಧ್ಯಂತದದಲ್ಲಿ ಕಳೆ ನಿಯಂತ್ರಣಕ್ಕೂ ಸಹಕಾರಿ.
ಅವರ ಕೃಷಿ ಯಶಸ್ಸಿನ ಹಿಂದೆ ಹಲವು ವರ್ಷಗಳ ಗಮನಿಸುವಿಕೆ, ಪ್ರಯೋಗ, ತಪ್ಪುಗಳಿಂದ ಕಲಿಯುವಿಕೆ ಮತ್ತು ಸೂಕ್ತ ಬದಲಾವಣೆಗಳನ್ನು ಮಾಡಿಕೊಳ್ಳುವ ಮನೋಭಾವ ಇದೆ.
ಪನ್ನಿಯೂರು-5ರಿಂದ ಆರಂಭಿಸಿ, ಅದರ ಸಾಧಕ-ಬಾಧಕಗಳನ್ನು ಗಮನಿಸಿ, ನಂತರ ಪನ್ನಿಯೂರು-9 ಮತ್ತು ಇತರ ತಳಿಗಳತ್ತ ಅವರು ಸಾಗಿದ್ದಾರೆ.
ಇದೇ ಒಬ್ಬ ಪ್ರಗತಿಪರ ರೈತನ ವಿಶೇಷತೆ.
ರಬ್ಬರ್ ಬೆಲೆ ಕುಸಿದಾಗ ಕೃಷಿಯನ್ನೇ ಬಿಡದೆ, ಅದೇ ಜಮೀನಿನಲ್ಲಿ ಹೊಸ ಅವಕಾಶವನ್ನು ಹುಡುಕಿದ ಜೋಸೆಫ್ ಚಾಕೋ ಅವರ ಪ್ರಯತ್ನ ಇತರ ರೈತರಿಗೂ ಸ್ಫೂರ್ತಿದಾಯಕವಾಗಿದೆ.
ಪನ್ನಿಯೂರು-9 ಮಾತ್ರವಲ್ಲ — ಸರಿಯಾದ ಕೃಷಿ ಪದ್ಧತಿಯೇ ಮುಖ್ಯ:
ಒಂದು ತಳಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬ ಕಾರಣಕ್ಕೆ ಅದೇ ತಳಿ ಪ್ರತಿಯೊಂದು ಜಮೀನಿನಲ್ಲೂ ಒಂದೇ ರೀತಿಯ ಫಲಿತಾಂಶ ನೀಡುತ್ತದೆ ಎಂದು ಹೇಳಲು ಸಾಧ್ಯವಿಲ್ಲ.
ಆದರೆ ಜೋಸೆಫ್ ಚಾಕೋ ಅವರ ಅನುಭವ ನಮಗೆ ಒಂದು ಪ್ರಮುಖ ಸಂದೇಶ ನೀಡುತ್ತದೆ:
“ತಳಿಯನ್ನು ಆಯ್ಕೆ ಮಾಡುವುದಷ್ಟೇ ಮುಖ್ಯವಲ್ಲ; ಆ ತಳಿಗೆ ಸೂಕ್ತವಾದ ಮಣ್ಣು, ನೀರು ಹರಿವು, ಆರೋಗ್ಯಕರ ನಾಟಿ ವಸ್ತು, ಪೋಷಕಾಂಶ ಮತ್ತು ರೋಗ ನಿರ್ವಹಣೆಯನ್ನೂ ಒಟ್ಟಿಗೆ ನಿರ್ವಹಿಸಬೇಕು.”
ರಿಪ್ಪನ್‌ಪೇಟೆಯಲ್ಲಿರುವ ಅವರ ತೋಟವನ್ನು ನೋಡಿದಾಗ, ಮಲೆನಾಡಿನಲ್ಲಿಯೂ ವೈಜ್ಞಾನಿಕವಾಗಿ ನಿರ್ವಹಿಸಿದರೆ ಮೆಣಸು ತೋಟವನ್ನು ಅತ್ಯುತ್ತಮ ಮಾದರಿ ತೋಟವನ್ನಾಗಿ ರೂಪಿಸಬಹುದು ಎಂಬುದು ಸ್ಪಷ್ಟವಾಗುತ್ತದೆ.
ಪನ್ನಿಯೂರು-9 – ರೈತನ ಅನುಭವದಲ್ಲಿ ಭರವಸೆ ಮೂಡಿಸಿರುವ ಒಂದು ತಳಿ;
ಆದರೆ ಉತ್ತಮ ತೋಟದ ಯಶಸ್ಸಿನ ಹಿಂದಿರುವುದು ತಳಿ ಮಾತ್ರವಲ್ಲ, ರೈತನ ನಿರಂತರ ಗಮನ ಮತ್ತು ನಿರ್ವಹಣೆಯೂ ಹೌದು.
