ದೇಶದ ಅತೀ ದೊಡ್ಡ ಉದ್ಯೋಗ ಸೃಷ್ಟಿ ಕರ್ತರು ಯಾರು?

ದೇಶದ ಅತಿ ದೊಡ್ಡ ಉದ್ಯೋಗದಾತ ಕೃಷಿ ಕ್ಷೇತ್ರವೇ ಎಂಬುದನ್ನು ಸರ್ಕಾರ ಅರಿಯಬೇಕಾದ ಸಮಯ ಬಂದಿದೆ. “ಸರ್ಕಾರದ ಅಂಕಿ ಅಂಶಗಳು ಬೇರೆ ಬೇರೆ ಕ್ಷೇತ್ರಗಳ ಉದ್ಯೋಗದಲ್ಲಿರುವ ಜನರ ಸಂಖ್ಯೆಯನ್ನು ಲೆಕ್ಕ ಹಾಕುತ್ತವೆ. ಆದರೆ ಕೃಷಿ ಕ್ಷೇತ್ರವು ವರ್ಷಪೂರ್ತಿ ಎಷ್ಟು ಮಾನವ ದಿನಗಳ ಉದ್ಯೋಗವನ್ನು ಸೃಷ್ಟಿಸುತ್ತದೆ ಎಂಬುದನ್ನು ಯಾರೂ ಲೆಕ್ಕ ಹಾಕುವುದಿಲ್ಲ. ಇದೇ ಕೃಷಿಯ ನಿಜವಾದ ಶಕ್ತಿ.”

ಉದ್ಯೋಗ ಸೃಷ್ಟಿಯ ಬಗ್ಗೆ ಮಾತನಾಡಿದಾಗ ಸರ್ಕಾರಗಳು ಸಾಮಾನ್ಯವಾಗಿ ಕೈಗಾರಿಕೆಗಳು, ಕಾರ್ಖಾನೆಗಳು, ಐಟಿ ಕಂಪನಿಗಳು ಮತ್ತು ದೊಡ್ಡ  ದೊಡ್ಡ ಮೂಲಸೌಕರ್ಯ ಯೋಜನೆಗಳನ್ನೇ ಉದಾಹರಣೆಯಾಗಿ ಹೇಳುತ್ತವೆ. ಆದರೆ ದೇಶದ ಅತಿದೊಡ್ಡ ಉದ್ಯೋಗವನ್ನು ಸೃಷ್ಟಿಸುವ ಕ್ಷೇತ್ರ ಯಾವುದು ಎಂಬ ಪ್ರಶ್ನೆ ಕೇಳಿದರೆ ಉತ್ತರ ಒಂದೇ – ಕೃಷಿ ಕ್ಷೇತ್ರ.

ಕೃಷಿ ಎಂದರೆ ಕೇವಲ ಆಹಾರ ಉತ್ಪಾದನೆ ಮಾತ್ರವಲ್ಲ. ಇದು ಕೋಟ್ಯಂತರ ಜನರಿಗೆ ನೇರ ಹಾಗೂ ಪರೋಕ್ಷವಾಗಿ ಉದ್ಯೋಗ ನೀಡುವ ಜೀವನಾಡಿಯಾಗಿದೆ. ಆದರೆ ಈ ಸತ್ಯಕ್ಕೆ ಬೇಕಾದ ಮಾನ್ಯತೆ ಮತ್ತು ಪ್ರೋತ್ಸಾಹ ಇನ್ನೂ ಸಿಕ್ಕಿಲ್ಲ.

ಕೃಷಿ – ದೇಶದ ಮೌನ ಉದ್ಯೋಗದಾತ:

ಭಾರತದಲ್ಲಿ ಸುಮಾರು 38.5 ಕೋಟಿ ಎಕರೆ (ಸುಮಾರು 15.6 ಕೋಟಿ ಹೆಕ್ಟೇರ್) ನಿವ್ವಳ ಕೃಷಿ ಭೂಮಿ ಇದೆ. ಸರಾಸರಿಯಾಗಿ ಒಂದು ಎಕರೆ ಭೂಮಿಯಲ್ಲಿ ವರ್ಷಕ್ಕೆ ಕನಿಷ್ಠ 100 ಮಾನವ ದಿನಗಳ (Man-days) ಉದ್ಯೋಗ ಸೃಷ್ಟಿಯಾಗುತ್ತದೆ ಎಂದು ಪರಿಗಣಿಸಿದರೆ, ದೇಶದ ಕೃಷಿ ಕ್ಷೇತ್ರವು ವರ್ಷಕ್ಕೆ ಸಾವಿರಾರು ಕೋಟಿ ಮಾನವ ದಿನಗಳ ಉದ್ಯೋಗವನ್ನು ಸೃಷ್ಟಿಸುತ್ತದೆ.

ಭೂಮಿ ಸಿದ್ಧಪಡಿಸುವುದರಿಂದ ಆರಂಭಿಸಿ, ಬಿತ್ತನೆ, ನಾಟಿ, ಕಳೆ ತೆಗೆಯುವುದು, ಗೊಬ್ಬರ ಹಾಕುವುದು, ಔಷಧ ಸಿಂಪಡಿಸುವುದು, ಕೊಯ್ಲು, ಸಾಗಣೆ ಹಾಗೂ ವಿಂಗಡಣೆವರೆಗೆ ಪ್ರತಿಯೊಂದು ಹಂತದಲ್ಲೂ ಕಾರ್ಮಿಕರ ಅಗತ್ಯವಿದೆ.

ಆದರೂ ಕೃಷಿಯನ್ನು ಉದ್ಯೋಗ ಸೃಷ್ಟಿಸುವ ಪ್ರಮುಖ ಕ್ಷೇತ್ರವೆಂದು ಸರ್ಕಾರಗಳು ಪರಿಗಣಿಸುವುದಿಲ್ಲ.

ರೈತ ಆಹಾರ ಉತ್ಪಾದಕ ಮಾತ್ರವಲ್ಲ, ಉದ್ಯೋಗ ನೀಡುವವನೂ:

ಒಬ್ಬ ರೈತ ತನ್ನ ಹೊಲದಲ್ಲಿ ಕೃಷಿ ಮಾಡುವ ಮೂಲಕ ಕೇವಲ ಬೆಳೆ ಬೆಳೆಯುವುದಿಲ್ಲ; ಅನೇಕ ಕಾರ್ಮಿಕರಿಗೆ ಜೀವನೋಪಾಯ ಒದಗಿಸುತ್ತಾನೆ.

ಉದಾಹರಣೆಗೆ, 5 ಎಕರೆ ಕೃಷಿ ಭೂಮಿ ಹೊಂದಿರುವ ರೈತ ವರ್ಷಕ್ಕೆ ಸುಮಾರು 500 ಮಾನವ ದಿನಗಳ ಉದ್ಯೋಗವನ್ನು ಸೃಷ್ಟಿಸುತ್ತಾನೆ. ದೇಶದ ಲಕ್ಷಾಂತರ ರೈತರನ್ನು ಒಟ್ಟುಗೂಡಿಸಿದರೆ, ಅವರು ಭಾರತದ ಅತಿದೊಡ್ಡ ಉದ್ಯೋಗದಾತರಾಗುತ್ತಾರೆ. ಮಾನವ ಸಂಪನ್ಮೂಲದ ಉದ್ಯೋಗ ಖಾತ್ರಿಗೆ ಕೃಷಿ ಕ್ಷೇತ್ರದ ಕೊಡುಗೆ ಇನ್ಯಾವುದಕ್ಕೂ ಸಾಟಿಯಲ್ಲ.

ಆದರೆ ಅವರಿಗೆ ಉದ್ಯೋಗ ಸೃಷ್ಟಿಕರ್ತ ಎಂಬ ಮಾನ್ಯತೆ ಸಿಗುತ್ತಿಲ್ಲ.

ಕೊರೊನಾ ಕಾಲ ಕಲಿಸಿದ ದೊಡ್ಡ ಪಾಠ:

ಕೊರೊನಾ ಸಮಯದಲ್ಲಿ ಕಾರ್ಖಾನೆಗಳು, ಹೋಟೆಲ್‌ಗಳು, ಸಾರಿಗೆ ಸೇರಿದಂತೆ ಅನೇಕ ಕ್ಷೇತ್ರಗಳು ಸ್ಥಗಿತಗೊಂಡವು. ಆದರೆ ಕೃಷಿ ಮಾತ್ರ ನಿಲ್ಲಲಿಲ್ಲ. ನಗರಗಳಿಂದ ಹಳ್ಳಿಗಳಿಗೆ ಮರಳಿದ ಲಕ್ಷಾಂತರ ಜನರಿಗೆ ಕೃಷಿಯೇ ಆಶ್ರಯವಾಯಿತು. ಹಳ್ಳಿಯ ಬೇರೆ ಉದ್ಯೋಗ ಕ್ಷೇತ್ರಗಳು ಮಕಾಡೆ ಮಲಗಿದಾಗ ಕೃಷಿ ಕ್ಷೇತ್ರ ಅವರನ್ನು ರಕ್ಷಿಸಿತು.

ಆ ಸಮಯದಲ್ಲಿ ದೇಶಕ್ಕೆ ಅನ್ನವನ್ನೂ ನೀಡಿದ್ದು ಕೃಷಿಯೇ, ಗ್ರಾಮೀಣ ಉದ್ಯೋಗವನ್ನೂ ಉಳಿಸಿದ್ದು ಕೃಷಿಯೇ. ಆದರೆ ಆ ಪಾಠವನ್ನು ನಾವು ಬೇಗ ಮರೆತಿದ್ದೇವೆ.

ಇಂದು ರೈತನೇ ಕೂಲಿ ಹುಡುಕುವ ಪರಿಸ್ಥಿತಿ:

ಒಂದು ಕಾಲದಲ್ಲಿ ಕೂಲಿ ಕೆಲಸಕ್ಕಾಗಿ ರೈತರ ಮನೆಗೆ ಬರುತ್ತಿದ್ದರು. ಆದರೆ ಇಂದು ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಈಗ ರೈತನೇ ಕೂಲಿಯವರನ್ನು ಹುಡುಕಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಕಾರ್ಮಿಕರ ಕೊರತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಬೆಳೆಗಳಿಗೆ ಸಮಯಕ್ಕೆ ಸರಿಯಾಗಿ ಕೆಲಸ ಮಾಡದಿದ್ದರೆ ಇಳುವರಿ ಕಡಿಮೆಯಾಗುತ್ತದೆ. ಬಹಳಷ್ಟು ಕೃಷಿಕರು ಇಂದು ಉತಾದನೆ ಕೊರತೆಗೆ  ಎದುರಿಸುತ್ತಿದ್ದರೆ  ಅದಕ್ಕೆ  ಕಾರಣ ಸಮಯಾಧಾರಿತ ಬೆಳೆ ನಿರ್ವಹಣೆ ಮಾಡಲಿಕ್ಕೆ ಸಾಧ್ಯವಾಗದಿರುವುದು.

ಇನ್ನೊಂದು ಕಡೆ, ಕೂಲಿ ದರ ಪ್ರತಿ ವರ್ಷ ಸುಮಾರು 10%ರಷ್ಟು ಹೆಚ್ಚುತ್ತಿದೆ. ಆದರೆ ರೈತನ ಉತ್ಪನ್ನದ ಬೆಲೆ ಮಾತ್ರ ಖಚಿತವಿಲ್ಲ. ಕೆಲವೊಮ್ಮೆ ಬೆಳೆ ಬೆಳೆದ ಖರ್ಚೂ ಸಿಗುವುದಿಲ್ಲ.ಇದೇ ಕೃಷಿಯ ದೊಡ್ಡ ಸಂಕಷ್ಟ.

ಉದ್ಯೋಗ ಖಾತರಿಯ ಯೋಜನೆಗಳು ಕೃಷಿಗೂ ಬರಬೇಕು:

ಸರ್ಕಾರವು ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MGNREGA) ಮೂಲಕ ಸಾವಿರಾರು ಕೋಟಿ ರೂಪಾಯಿ ವೆಚ್ಚ ಮಾಡುತ್ತಿದೆ. ಇದು ಗ್ರಾಮೀಣ ಉದ್ಯೋಗಕ್ಕೆ ನೆರವಾಗಿರುವುದು ಸತ್ಯ.ಆದರೆ ಹೆಚ್ಚಿನ ಕೆಲಸಗಳು ರಸ್ತೆ, ಕಾಲುವೆ, ಕಟ್ಟಡ ಹಾಗೂ ಇತರೆ ನಾಗರಿಕ ಕಾಮಗಾರಿಗಳಿಗೆ ಸೀಮಿತವಾಗಿವೆ.

ಪ್ರಶ್ನೆ ಏನೆಂದರೆ—

ದೇಶದ ಅತಿದೊಡ್ಡ ಉದ್ಯೋಗ ನೀಡುತ್ತಿರುವ ಕೃಷಿಗೆ ಇದೇ ರೀತಿಯ ಬೆಂಬಲ ಏಕೆ ಸಿಗಬಾರದು?

ಒಬ್ಬ ರೈತ 5 ಎಕರೆ ಭೂಮಿಯಲ್ಲಿ ಕೃಷಿ ಮಾಡಿ ವರ್ಷಕ್ಕೆ ಸುಮಾರು 500 ಮಾನವ ದಿನಗಳ  ಕಾಯಂ ಉದ್ಯೋಗ ನೀಡುತ್ತಿದ್ದರೆ, ಸರ್ಕಾರವು ಆ ಕೂಲಿ ವೆಚ್ಚದ ಕನಿಷ್ಠ ಶೇಕಡಾ 50ರಷ್ಟು ಸಹಾಯಧನವನ್ನು ರೈತನಿಗೆ ನೀಡಿದರೆ ಏನಾಗಬಹುದು?

  • ರೈತನ ಉತ್ಪಾದನಾ ವೆಚ್ಚ ಕಡಿಮೆಯಾಗುತ್ತದೆ.
  • ಕಾರ್ಮಿಕರಿಗೆ ಹೆಚ್ಚು ಉದ್ಯೋಗ ದೊರೆಯುತ್ತದೆ. ಉದ್ಯೋಗ ಬಧ್ರತೆ ದೊರೆಯುತ್ತದೆ.
  • ಕೃಷಿ ಕೆಲಸಗಳು ಸಮಯಕ್ಕೆ ಪೂರ್ಣಗೊಳ್ಳುತ್ತವೆ.
  • ಗ್ರಾಮೀಣ ಆರ್ಥಿಕತೆ ಬಲವಾಗುತ್ತದೆ.
  • ದೇಶದ ಆಹಾರ ಭದ್ರತೆ ಇನ್ನಷ್ಟು ದೃಢವಾಗುತ್ತದೆ.

ಇಂತಹ ಯೋಜನೆ ಕೃಷಿಗೂ ಉದ್ಯೋಗ ಖಾತರಿಯ ಹೊಸ ದಾರಿಯನ್ನು ತೆರೆದುಕೊಡಬಹುದು.

ಉತ್ಪಾದನಾ ವೆಚ್ಚ ಕಡಿಮೆಯಾಗದಿದ್ದರೆ ಕೃಷಿ ಉಳಿಯುವುದಿಲ್ಲ;

ಇಂದು ಕೃಷಿಯ ದೊಡ್ಡ ಸಮಸ್ಯೆ ಇಳುವರಿ ಅಲ್ಲ. ಸಮಸ್ಯೆ ಎಂದರೆ ಹೆಚ್ಚುತ್ತಿರುವ ಉತ್ಪಾದನಾ ವೆಚ್ಚ. ಗೊಬ್ಬರ, ಔಷಧಿ, ನೀರಾವರಿ, ಯಂತ್ರೋಪಕರಣಗಳು, ಕೂಲಿ—ಎಲ್ಲದರ ವೆಚ್ಚ ವರ್ಷದಿಂದ ವರ್ಷಕ್ಕೆ ಏರುತ್ತಿದೆ. ಆದರೆ ರೈತನ ಉತ್ಪನ್ನದ ಬೆಲೆ ಮಾತ್ರ ಮಾರುಕಟ್ಟೆಯ ಮೇಲೆ ಅವಲಂಬಿತವಾಗಿದೆ.ಖರ್ಚು ಹೆಚ್ಚಾಗಿ, ಆದಾಯ ಅನಿಶ್ಚಿತವಾಗಿರುವ ಕಾರಣ ಯುವಕರು ಕೃಷಿಯತ್ತ ಆಸಕ್ತಿ ತೋರಿಸುತ್ತಿಲ್ಲ.

ಮುಂದಿನ ತಲೆಮಾರನ್ನು ಕೃಷಿಯಲ್ಲಿ ಉಳಿಸಬೇಕಾದರೆ:

ಇಂದು ಅನೇಕ ರೈತರ ಮಕ್ಕಳು ಕೃಷಿಯನ್ನು ಮುಂದುವರಿಸಲು ಹಿಂದೇಟು ಹಾಕುತ್ತಿದ್ದಾರೆ. ಕಾರಣ ಅವರಿಗೆ ಕೃಷಿಯಲ್ಲಿ ಭದ್ರತೆ ಕಾಣುತ್ತಿಲ್ಲ.ಉತ್ಪಾದನಾ ವೆಚ್ಚ ಕಡಿಮೆ ಮಾಡಿ, ರೈತನ ಆದಾಯ ಸ್ಥಿರಗೊಳಿಸುವ ನೀತಿಗಳನ್ನು ಸರ್ಕಾರ ರೂಪಿಸಿದರೆ ಮಾತ್ರ ಮುಂದಿನ ತಲೆಮಾರು ಕೃಷಿಯಲ್ಲಿ ಉಳಿಯುತ್ತದೆ.ಇಲ್ಲದಿದ್ದರೆ ಕೃಷಿಭೂಮಿ ಉಳಿದರೂ ಕೃಷಿಕರು ಕಡಿಮೆಯಾಗುವ ಅಪಾಯ ಎದುರಾಗಬಹುದು.

SectorEstimated employment (2023–24)
Agriculture292 million (29.2 crore)
Industry (manufacturing, construction, mining, etc.)153 million (15.3 crore)
Services188 million (18.8 crore)
Total non-agriculture (Industry + Services)341 million (34.1 crore)
Total employed workforce634 million (63.4 crore)
 

ಕೃಷಿಯನ್ನು ಉದ್ಯೋಗ ಸೃಷ್ಟಿಯ ಕೇಂದ್ರವಾಗಿ ಗುರುತಿಸೋಣ

ದೇಶದಲ್ಲಿ ನಿಜವಾದ ಉದ್ಯೋಗ ಸೃಷ್ಟಿಕರ್ತರು ಯಾರು ಎಂಬ ಪ್ರಶ್ನೆಗೆ ಉತ್ತರ ಹುಡುಕುವ ಸಮಯ ಬಂದಿದೆ. ಪ್ರತಿ ಎಕರೆ ಕೃಷಿಭೂಮಿ  ವರ್ಷ ಪೂರ್ತಿ 100ಕ್ಕೂ  ಹೆಚ್ಚು ಮಾನವ ದಿನಗಳ  ಉದ್ಯೋಗ ನೀಡುತ್ತದೆ. ಇದರಿಂದ ಪ್ರತಿ ರೈತ ಕಾರ್ಮಿಕರಿಗೆ ಬದುಕು ನೀಡುತ್ತಾನೆ.ಪ್ರತಿ ಕೃಷಿ ಚಟುವಟಿಕೆ ಗ್ರಾಮೀಣ ಆರ್ಥಿಕತೆಯನ್ನು ಚಲಿಸುವಂತೆ ಮಾಡುತ್ತದೆ.ಆದ್ದರಿಂದ ರೈತನನ್ನು ಕೇವಲ ಅನ್ನದಾತ ಎಂದು ಮಾತ್ರ ಕರೆಯದೆ, ದೇಶದ ಅತಿದೊಡ್ಡ ಉದ್ಯೋಗದಾತ” ಎಂದು ಗೌರವಿಸುವ ಕಾಲ ಬಂದಿದೆ.ಕೃಷಿಯನ್ನು ಉಳಿಸುವುದು ಎಂದರೆ ಕೇವಲ ರೈತನನ್ನು ಉಳಿಸುವುದಲ್ಲ; ದೇಶದ ಉದ್ಯೋಗ, ಗ್ರಾಮೀಣ ಆರ್ಥಿಕತೆ ಮತ್ತು ಆಹಾರ ಭದ್ರತೆಯನ್ನು ಉಳಿಸುವುದಾಗಿದೆ

Leave a Reply

Your email address will not be published. Required fields are marked *

error: Content is protected !!