ಕೃಷಿಕರ ಮೌನ ಶತ್ರುಗಳು – ಗಡಿವಿವಾದ, ನೀರಿನ ಜಗಳ ಮತ್ತು ಅಸೂಯೆ.

“ಕೃಷಿಯ ದೊಡ್ಡ ಶತ್ರು ಬರ, ಅತಿವೃಷ್ಟಿ, ಕೀಟರೋಗ ಅಥವಾ ಮಾರುಕಟ್ಟೆಯ ಬೆಲೆ ಕುಸಿತ ಮಾತ್ರವಲ್ಲ. ಕೆಲವೊಮ್ಮೆ ಕೃಷಿಯ ಅತಿದೊಡ್ಡ ಮೌನ ಶತ್ರು ನಮ್ಮ ಹೊಲದ ಗಡಿಯ ಆಚೆಯೇ ನಿಂತಿರುತ್ತಾನೆ.”

ಕೃಷಿ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಮಾತನಾಡುವಾಗ ನಾವು ಹವಾಮಾನ ಬದಲಾವಣೆ, ಕಾರ್ಮಿಕರ ಕೊರತೆ, ಹೆಚ್ಚುತ್ತಿರುವ ಕೃಷಿ ವೆಚ್ಚ, ಮಾರುಕಟ್ಟೆಯ ಅನಿಶ್ಚಿತತೆ, ಕಾಡುಪ್ರಾಣಿಗಳ ಹಾವಳಿ, ಮಣ್ಣಿನ ಫಲವತ್ತತೆ ಕುಸಿತ ಇತ್ಯಾದಿಗಳನ್ನು ಉಲ್ಲೇಖಿಸುತ್ತೇವೆ. ಆದರೆ ಕೃಷಿಯ ಬೇರುಗಳನ್ನೇ ದುರ್ಬಲಗೊಳಿಸುತ್ತಿರುವ ಮತ್ತೊಂದು ಗಂಭೀರ ಸಮಸ್ಯೆಯ ಬಗ್ಗೆ ನಾವು ಹೆಚ್ಚು ಚರ್ಚಿಸುವುದಿಲ್ಲ. ಅದು ನೆರೆಹೊರೆಯ ರೈತರ ನಡುವಿನ ಗಡಿ ವಿವಾದ, ನೀರಿನ ಜಗಳ, ಅಸೂಯೆ ಮತ್ತು ಪರಸ್ಪರ ವೈಮನಸ್ಸು.

ಇಂದು ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಸಮಸ್ಯೆಗಳು ಸಾಮಾನ್ಯವಾಗುತ್ತಿವೆ. ಈ ಜಗಳಗಳು ಕೇವಲ ಇಬ್ಬರು ರೈತರ ನಡುವಿನ ಸಮಸ್ಯೆಗಳಲ್ಲ; ಇವು ಕೃಷಿಯ ಆರ್ಥಿಕತೆ, ಗ್ರಾಮಗಳ ಸಾಮಾಜಿಕ ಸಾಮರಸ್ಯ ಮತ್ತು ಮುಂದಿನ ಪೀಳಿಗೆಯ ಕೃಷಿಯ ಭವಿಷ್ಯದ ಮೇಲೂ ಪರಿಣಾಮ ಬೀರುತ್ತಿವೆ.

ದೇಶಗಳ ಗಡಿ ವಿವಾದ – ರೈತರ ಹೊಲದ ಗಡಿ ವಿವಾದ:

ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತವು ಪಾಕಿಸ್ತಾನ ಹಾಗೂ ಚೀನಾದೊಂದಿಗೆ ಗಡಿ ವಿವಾದಗಳನ್ನು ಎದುರಿಸುತ್ತಿದೆ. ಇದಕ್ಕಾಗಿ ನಮ್ಮೊಳಗೆ ಶತ್ರುತ್ತ್ವ ಬೆಳೆದಿದೆ. ಪ್ರತಿಯೊಂದು ದೇಶವೂ ತನ್ನ ಗಡಿಯನ್ನು ರಕ್ಷಿಸಲು ಪ್ರಯತ್ನಿಸುತ್ತದೆ.

ಆದರೆ ಇದೇ ಮನೋಭಾವ ನಮ್ಮ ಗ್ರಾಮಗಳಲ್ಲಿಯೂ ಕಾಣಸಿಗುತ್ತದೆ.

ದೇಶಗಳು ಕಿಲೋಮೀಟರ್‌ಗಳಷ್ಟು ಭೂಮಿಗಾಗಿ ಹೋರಾಡಿದರೆ, ರೈತರು ಕೆಲವೇ ಅಡಿ ಅಥವಾ ಕೆಲವೇ ಇಂಚಿನ ಜಾಗಕ್ಕಾಗಿ ದಶಕಗಳ ಕಾಲ ಜಗಳವಾಡುತ್ತಾರೆ.

ಅಂತರವೇನು?

ಅಲ್ಲಿ ರಾಷ್ಟ್ರಗಳು ಹೋರಾಡುತ್ತವೆ.

ಇಲ್ಲಿ ನೆರೆಹೊರೆಯ ರೈತರು ಹೋರಾಡುತ್ತಾರೆ.

ಆದರೆ ನಷ್ಟ ಮಾತ್ರ ಎರಡೂ ಕಡೆ ಒಂದೇ—ಸಮಯ, ಹಣ, ಶಾಂತಿ ಮತ್ತು ಸಂಬಂಧಗಳು.

ಗಡಿ ಕಲ್ಲು ಸರಿದರೆ ಜೀವನವೇ ಸರಿಯುತ್ತದೆ:

ಒಂದು ಮಳೆಗಾಲದಲ್ಲಿ ಗಡಿ ಕಲ್ಲು ಸ್ವಲ್ಪ ಜಾರಿರಬಹುದು. ಅಥವಾ ಬೇಕೆಂದೇ ಸ್ಥಾನಪಲ್ಲಟ ಮಾಡಿರಬಹುದು.

ಬೇಲಿ ಸ್ವಲ್ಪ ಒಳಗೆ ಅಥವಾ ಹೊರಗೆ ಹೋಗಿರಬಹುದು.

ಹಳೆಯ ಸರ್ವೆ ಸ್ಪಷ್ಟವಾಗಿರದೆ ಇರಬಹುದು.

ಅಥವಾ ನಡೆದಾಡುವ ದಾರಿಯ ಬಗ್ಗೆ ಭಿನ್ನಾಭಿಪ್ರಾಯ ಉಂಟಾಗಿರಬಹುದು. ಇತ್ತೀಚೆಗೆ  ಜಗಳಕ್ಕೆ ಸೇರ್ಪಡೆಯಾಗಿರುವುದು  ಹೊಲಕ್ಕೆ ಅಥವಾ ಮನೆಗೆ ಹೋಗುವ ರಸ್ತೆಗೆ.

ಇಂತಹ ಸಣ್ಣ ಘಟನೆಗಳು ಅನೇಕ ಬಾರಿ ಹಲವು ವರ್ಷಗಳ ನ್ಯಾಯಾಂಗ ವ್ಯಾಜ್ಯಗಳಿಗೆ ಕಾರಣವಾಗುತ್ತವೆ.

ರೈತ ತನ್ನ ಕೃಷಿ ಆದಾಯವನ್ನು ಮಣ್ಣಿನ ಫಲವತ್ತತೆ ಹೆಚ್ಚಿಸಲು, ನೀರಾವರಿ ಸುಧಾರಿಸಲು ಅಥವಾ ಹೊಸ ತಂತ್ರಜ್ಞಾನ ಅಳವಡಿಸಲು ಬಳಸುವ ಬದಲು, ವಕೀಲರು, ಸರ್ವೇ, ನ್ಯಾಯಾಲಯ ಮತ್ತು ಕಚೇರಿಗಳ ಸುತ್ತಾಟಕ್ಕೆ ಖರ್ಚು ಮಾಡಬೇಕಾಗುತ್ತದೆ.

ನೀರಿನ ಜಗಳ – ಜೀವ ಕೊಡುವ ನೀರೇ ವೈಮನಸ್ಸಿನ ಕಾರಣ:

ಬೇಸಾಯದ ಬಳಕೆಯ ನೀರು ಹಿಂದಿನಿಂದಲೂ ವಿವಾದಗಳ ವಿಷಯವಾಗಿತ್ತು. ಹಿಂದೆ ಹಳ್ಳ ಹೊಳೆ ನೀರಿನ ಬಳಕೆಯಲ್ಲಿ ಜಗಳಗಳಾಗುತ್ತಿತ್ತು. ಈಗ ಕೊಳವೆ ಬಾವಿ ವಿಚಾರದಲ್ಲಿ ಆಗಲಾರಂಭಿಸಿದೆ. ಒಬ್ಬ ರೈತ ಕೊರೆಸಿದ  ಕೊಳೆವೆ ಬಾವಿಯಲ್ಲಿ ನೀರು ಬಂದರೆ ಮತ್ತೊಬ್ಬ ಹತ್ತಿರವೇ ಕೊರೆಯಿಸಿ ಅವನ ನೀರನ್ನು ತಾನು ಕಬಳಿಸುವುದು ಮುಂತಾದವು ಸಾಮಾನ್ಯವಾಗಿದೆ.

ನೀರು ಪ್ರಾಕೃತಿಕ ಸಂಪನ್ಮೂಲ. ಇದು ಎಲ್ಲ್ಲಾ ಕೃಷಿಕರಿಗೂ ಬೇಕು. ಇದನ್ನು ಹಂಚಿಕೊಂಡು  ಬಳಸುವ ಬದಲು ಜಗಳದ ಮೂಲಕ ನೆರೆಹೊರೆಯವರ ವೈಮನಸ್ಸು, ಮನಶಾಂತಿ ಹಾಳಾಗುತ್ತಿದೆ.

ಹವಾಮಾನ ಬದಲಾವಣೆಯಿಂದ ಕೆಲವೊಮ್ಮೆ ಬರ, ಮತ್ತೊಮ್ಮೆ ಅತಿವೃಷ್ಟಿ ಸಂಭವಿಸುತ್ತಿರುವ ಈ ಕಾಲದಲ್ಲಿ ನೀರಿನ ನಿರ್ವಹಣೆಯಲ್ಲಿ ಪರಸ್ಪರ ಸಹಕಾರ ಅತ್ಯಗತ್ಯವಾಗಿದೆ.

ಅಸೂಯೆ – ಕಾಣದ ಶತ್ರು;

ಎಲ್ಲಾ ಜಗಳಗಳೂ ಗಡಿ ಅಥವಾ ನೀರಿನಿಂದಲೇ ಆರಂಭವಾಗುವುದಿಲ್ಲ. ಕೆಲವೊಮ್ಮೆ ಅವು ಅಸೂಯೆಯಿಂದ ಆರಂಭವಾಗುತ್ತವೆ. ಒಬ್ಬ ರೈತ ಉತ್ತಮ ಮನೆ ಕಟ್ಟಿದರೆ…

ಹೊಸ ಯಂತ್ರ ಖರೀದಿಸಿದರೆ…

ಹೊಸ ತಂತ್ರಜ್ಞಾನ ಅಳವಡಿಸಿದರೆ…

ಹೆಚ್ಚು ಉತ್ಪಾದನೆ ಪಡೆದರೆ…

ಅದನ್ನು ನೋಡಿ ಕಲಿಯುವ ಬದಲು ಕೆಲವರು ಅಸೂಯೆಪಡುತ್ತಾರೆ.

ಈ ಅಸೂಯೆಯೇ ಸ್ನೇಹವನ್ನು ಶತ್ರುತ್ವವಾಗಿ ಪರಿವರ್ತಿಸುತ್ತದೆ.

ಕೃಷಿಯ ಬೆಳವಣಿಗೆಗೆ ಸ್ಪರ್ಧೆ ಬೇಕು; ಆದರೆ ಅದು ಜ್ಞಾನದ ಸ್ಪರ್ಧೆಯಾಗಬೇಕು, ಅಸೂಯೆಯ ಸ್ಪರ್ಧೆಯಾಗಬಾರದು.

ಗ್ರಾಮಗಳ ಸಾಮಾಜಿಕ ಜೀವನ ಬದಲಾಗುತ್ತಿದೆ:

ಒಂದು ಕಾಲದಲ್ಲಿ ಗ್ರಾಮಗಳು ಒಂದು ಕುಟುಂಬದಂತೆ ಬದುಕುತ್ತಿದ್ದವು. ನೆರೆಹೊರೆಯವರು ಒಬ್ಬರಿಗೊಬ್ಬರು ಕೃಷಿ ಕೆಲಸಗಳಲ್ಲಿ ಸಹಾಯ ಮಾಡುತ್ತಿದ್ದರು. ಕಷ್ಟ ಬಂದಾಗ ಬೆಂಬಲವಾಗಿ ನಿಲ್ಲುತ್ತಿದ್ದರು.ಹಬ್ಬ-ಹರಿದಿನಗಳನ್ನು ಒಟ್ಟಿಗೆ ಆಚರಿಸುತ್ತಿದ್ದರು. ಇಂದು ಪರಿಸ್ಥಿತಿ ಬದಲಾಗಿದೆ.

ಈಗ ಹಳ್ಳಿಯ ಜನರಲ್ಲಿ ಒಬ್ಬರನ್ನು ಕೇಳಿ,

ನಿಮ್ಮ ಪಕ್ಕದ ಮನೆಯವರು ಹೇಗಿದ್ದಾರೆ?” ಅಥವಾ ಇಂತಹ ಹೆಸರಿನವರ ಮನೆ ಎಲ್ಲಿ ಎಂದು ಕೇಳಿ.

ಆಗ ಸಿಗುವ ಉತ್ತರ,

ಗೊತ್ತಿಲ್ಲ.”

ಈ ಉತ್ತರ ನಗರಗಳಲ್ಲಿ ಕೇಳಿಬರುತ್ತಿತ್ತು.

ಇಂದು ಗ್ರಾಮಗಳಲ್ಲಿಯೂ ಕೇಳಿಬರುತ್ತಿದೆ.

ಇದು ಕೃಷಿ ಸಮಾಜಕ್ಕೆ ಅಪಾಯದ ಗಂಟೆಯಾಗಿದೆ.

ಬ್ರಿಟಿಷರ ಕಾಲದ ವ್ಯವಸ್ಥೆ ಇನ್ನೂ ಮುಂದುವರಿದಿದೆಯೇ?

ಭೂ ವಿವಾದಗಳಿಗೆ ನಮ್ಮ ಆಡಳಿತ ವ್ಯವಸ್ಥೆಯೂ ಒಂದು ಕಾರಣವಾಗಿದೆ.ಬ್ರಿಟಿಷರ ಕಾಲದಲ್ಲಿ ರೂಪುಗೊಂಡ ಅನೇಕ ಭೂ ದಾಖಲೆಗಳು ಮತ್ತು ಸರ್ವೆಗಳು ಇಂದಿಗೂ ಮೂಲ ಆಧಾರವಾಗಿವೆ. ಕಾಲ ಬದಲಾಗಿದೆ. ಭೂಮಿಯ ಬೆಲೆ ಸಾವಿರಾರು ಪಟ್ಟು ಹೆಚ್ಚಾಗಿದೆ. ಆದರೆ ಅನೇಕ ಕಡೆಗಳಲ್ಲಿ ಗಡಿಗಳ ಸ್ಪಷ್ಟತೆ ಇನ್ನೂ ಸಮಸ್ಯೆಯಾಗಿಯೇ ಉಳಿದಿದೆ. ಇದು ಹಳೆಯ ಮದ್ಯವನ್ನು ಹೊಸ ಬಾಟಲಿಯಲ್ಲಿ ಹಾಕಿದಂತೆ ಎನ್ನುವ ಪರಿಸ್ಥಿತಿಯಾಗಿದೆ. ಹಿಂದೆ ಪಟೇಲರು ಶಾನುಬೋಗರು ಹಾಗೆಯೇ ಊರ ಹಿರಿಯರುಹಲವು ಭೂ ವ್ಯಾಜ್ಯಗಳನ್ನು ಪರಿಹರಿಸಿ ನೆಮ್ಮದಿಯಲ್ಲಿರುವಂತೆ ಮಾಡುತ್ತಿದ್ದರು. ಈಗ  ಏನಿದ್ದರೂ ಕೋರ್ಟು ಕಚೇರಿ ಅಲೆದು ಭಾಗ್ಯ ಇದ್ದರೆ ನ್ಯಾಯ ಪಡೆಯುವ ಸ್ಥಿತಿ ಉಂಟಾಗಿದೆ.

ಇಂದು ಜಿಪಿಎಸ್, ಡ್ರೋನ್ ಸರ್ವೆ, ಡಿಜಿಟಲ್ ಭೂ ದಾಖಲೆಗಳಂತಹ ತಂತ್ರಜ್ಞಾನಗಳಿದ್ದರೂ ಅವುಗಳ ಸಮರ್ಪಕ ಬಳಕೆ ಎಲ್ಲೆಡೆ ಆಗುತ್ತಿಲ್ಲ.

ಭೂಮಿಯ ಬೆಲೆ ಹೆಚ್ಚಾದಂತೆ ಜಗಳವೂ ಹೆಚ್ಚುತ್ತಿದೆ:

ಇಂದು ಕೃಷಿ ಭೂಮಿಯ ಬೆಲೆ ಅನೇಕ ಪಟ್ಟು ಹೆಚ್ಚಾಗಿದೆ.ಹಿಂದೆ ಕೃಷಿಗಾಗಿ ಭೂಮಿಯನ್ನು ಖರೀದಿಸುತ್ತಿದ್ದರು.ಇಂದು ಅದರ ಮಾರುಕಟ್ಟೆ ಮೌಲ್ಯವೂ ದೊಡ್ಡ ಆಕರ್ಷಣೆಯಾಗಿದೆ.ಭೂಮಿಯ ಬೆಲೆ ಏರಿದಂತೆ ಗಡಿ ವಿವಾದಗಳೂ ಹೆಚ್ಚುತ್ತಿವೆ.ವ್ಯಾಜ್ಯಗಳು ವರ್ಷಗಟ್ಟಲೆ ನಡೆಯುತ್ತವೆ.ರೈತ ತನ್ನ ಆದಾಯವನ್ನೂ ಕಳೆದುಕೊಳ್ಳುತ್ತಾನೆ.ಅದರಿಗಿಂತ ಮುಖ್ಯವಾಗಿ ತನ್ನ ನೆಮ್ಮದಿ ಮತ್ತು ತಾಳ್ಮೆಯನ್ನೂ ಕಳೆದುಕೊಳ್ಳುತ್ತಾನೆ.

ಒಗ್ಗಟ್ಟಿನ ನೆರೆಹೊರೆಯೇ ಕೃಷಿಯ ದೊಡ್ಡ ಬಂಡವಾಳ:

ನೆರೆಹೊರೆಯ ರೈತರು ಒಗ್ಗಟ್ಟಿನಿಂದ ಬದುಕಿದರೆ ಕೃಷಿಯ ಅನೇಕ ಸಮಸ್ಯೆಗಳು ತಾನಾಗಿಯೇ ಪರಿಹಾರವಾಗುತ್ತವೆ. ಕಾರ್ಮಿಕರನ್ನು ಪರಸ್ಪರ ಹಂಚಿಕೊಳ್ಳಬಹುದು, ಕೃಷಿ ಯಂತ್ರೋಪಕರಣಗಳನ್ನು ಜಂಟಿಯಾಗಿ ಬಳಸಬಹುದು, ನೀರಿನ ನಿರ್ವಹಣೆಯನ್ನು ಸಮನ್ವಯದಿಂದ ಮಾಡಬಹುದು. ಇದರಿಂದ ಕೃಷಿ ವೆಚ್ಚ ಕಡಿಮೆಯಾಗುತ್ತದೆ, ಕಾರ್ಮಿಕರ ಕೂಲಿ ದರಗಳ ಮೇಲಿನ ಒತ್ತಡವೂ ನಿಯಂತ್ರಣಕ್ಕೆ ಬರುತ್ತದೆ. ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಕೃಷಿ ಹೆಚ್ಚು ಲಾಭದಾಯಕ ಮತ್ತು ಶಾಶ್ವತವಾಗುತ್ತದೆ.

ಒಂದು ಚಿಂತನೆ

ಈ ಸಮಸ್ಯೆಗೆ ಕೇವಲ ಕಾನೂನು ಮಾತ್ರ ಪರಿಹಾರವಲ್ಲ.ಆದರೂ ಚರ್ಚಿಸಬೇಕಾದ ಒಂದು ಪ್ರಶ್ನೆ ಇದೆ.ಕೃಷಿ ಭೂಮಿಯನ್ನು ವ್ಯಾಪಾರದ ವಸ್ತುವಾಗಿ ನೋಡುವುದಕ್ಕಿಂತ, ಆಹಾರ ಉತ್ಪಾದನೆಯ ರಾಷ್ಟ್ರೀಯ ಸಂಪತ್ತಾಗಿ ನೋಡಬೇಕೇ? ಕೃಷಿ ಭೂಮಿಯ ಮಾರಾಟದ ಮೇಲೆ ಕೆಲವು ನಿಯಂತ್ರಣಗಳನ್ನು ತರಬೇಕೇ? ಅಥವಾ ಕೃಷಿ ಭೂಮಿ ಕೃಷಿಗಾಗಿಯೇ ಉಳಿಯುವಂತೆ ಹೊಸ ನೀತಿಗಳನ್ನು ರೂಪಿಸಬೇಕೇ? ಇವು ಸಾರ್ವಜನಿಕ ಚರ್ಚೆಗೆ ಒಳಪಡಬೇಕಾದ ವಿಷಯಗಳು.

ಪರಿಹಾರವೇನು?

  • ನಿಖರವಾದ ಹಾಗೂ ನಿಯಮಿತ ಭೂ ಸರ್ವೆ.
  • ಡಿಜಿಟಲ್ ಭೂ ದಾಖಲೆಗಳ ನವೀಕರಣ.
  • ಗಡಿ ವಿವಾದಗಳಿಗೆ ತ್ವರಿತ ಪರಿಹಾರ.
  • ನ್ಯಾಯಾಲಯಕ್ಕೆ ಹೋಗುವ ಮೊದಲು ಗ್ರಾಮ ಮಟ್ಟದ ಮಧ್ಯಸ್ಥಿಕೆ.
  • ನೀರಿನ ಜಂಟಿ ನಿರ್ವಹಣೆ.
  • ನೆರೆಹೊರೆಯ ರೈತರ ನಡುವೆ ವಿಶ್ವಾಸ ಮತ್ತು ಸಹಕಾರ.
  • ಸರಕಾರ ನೇಮಿಸಿದ ಗ್ರಾಮ ಲೆಕ್ಕಿಗರು, ತಹಸೀಲ್ದಾರರು, ಇವರು ಈ ಸಮಸ್ಯೆಗಳನ್ನು ನಿಸ್ಪಕ್ಷಪಾತವಾಗಿ ಪರಿಹರಿಸಿಕೊಡುವಂತಾದರೆ  ಎಷ್ಟು ಸುಭಿಕ್ಷೆ.

ಸಮಾರೋಪ

ಕೃಷಿಯ ನಿಜವಾದ ಶಕ್ತಿ ಕೇವಲ ಫಲವತ್ತಾದ ಮಣ್ಣಲ್ಲ.ಅದು ರೈತರ ನಡುವಿನ ವಿಶ್ವಾಸ, ಒಗ್ಗಟ್ಟು ಮತ್ತು ಸಹಕಾರ.ಗಡಿಯು ಭೂಮಿಯ ಮಿತಿಯನ್ನು ಮಾತ್ರ ಸೂಚಿಸಬೇಕು; ಸಂಬಂಧಗಳ ಮಿತಿಯನ್ನು ಅಲ್ಲ.ನೀರು ಬೆಳೆಗಳನ್ನು ಬೆಳೆಸಬೇಕು; ವೈಮನಸ್ಸನ್ನು ಅಲ್ಲ.ನೆರೆಹೊರೆಯ ರೈತನ ಯಶಸ್ಸು ಅಸೂಯೆ ಹುಟ್ಟಿಸಬಾರದು; ಹೊಸದನ್ನು ಕಲಿಯುವ ಪ್ರೇರಣೆಯಾಗಬೇಕು.ತ್ರುತ್ವದಿಂದ ಏನನ್ನೂ ಸಾಧಿಸಲು ಆಗುವುದಿಲ್ಲ.

ಇಂದು ಕೃಷಿಗೆ ಹೊಸ ಬೀಜಗಳು, ಹೊಸ ಯಂತ್ರಗಳು, ಹೊಸ ತಂತ್ರಜ್ಞಾನಗಳು ಅಗತ್ಯವೆಂಬುದು ನಿಜ. ಆದರೆ ಅದಕ್ಕಿಂತ ಹೆಚ್ಚು ಅಗತ್ಯವಿರುವುದು ಒಗ್ಗಟ್ಟಿನ ಗ್ರಾಮಗಳು ಮತ್ತು ಪರಸ್ಪರ ವಿಶ್ವಾಸದಿಂದ ಬದುಕುವ ರೈತರು.

ಒಗ್ಗಟ್ಟಿನ ಗ್ರಾಮವೇ ಕೃಷಿಯ ಅತಿ ದೊಡ್ಡ ಶಕ್ತಿ. ರೈತರ ನಡುವೆ ಪರಸ್ಪರ ವಿಶ್ವಾಸ ಮತ್ತು ಸಹಕಾರ ಇದ್ದರೆ, ಯಾವುದೇ ಯಂತ್ರ, ಗೊಬ್ಬರ ಅಥವಾ ಸರ್ಕಾರಿ ಯೋಜನೆ ನೀಡಲಾರದಷ್ಟು ಆರ್ಥಿಕ ಲಾಭ ಮತ್ತು ಮಾನಸಿಕ ನೆಮ್ಮದಿಯನ್ನು ಕೃಷಿ ಕ್ಷೇತ್ರಕ್ಕೆ ನೀಡಬಹುದು. ಕೃಷಿಯ ಭವಿಷ್ಯವು ಕೇವಲ ಮಣ್ಣಿನ ಫಲವತ್ತತೆಯ ಮೇಲೆ ಅಲ್ಲ; ರೈತರ ನಡುವಿನ ಸಂಬಂಧಗಳ ಫಲವತ್ತತೆಯ ಮೇಲೂ ಅವಲಂಬಿತವಾಗಿದೆ.

Leave a Reply

Your email address will not be published. Required fields are marked *

error: Content is protected !!