ನಾನು ಕೃಷಿಕ… ನನ್ನ ನೈಜ ಆದಾಯ ಎಷ್ಟು?

ನಾನು ಕೃಷಿಕ ನನ್ನ ಆದಾಯ ಎಷ್ಟು ಗೊತ್ತೇ

ಕೃಷಿ ಎಂದರೆ ಲಾಭದಾಯಕ ವೃತ್ತಿ, ರೈತನೇ ತನ್ನ ಕೆಲಸದ ಮಾಲೀಕ, ಬೇಕಾದಾಗ ಕೆಲಸ ಮಾಡಬಹುದು, ಲಕ್ಷಾಂತರ ರೂಪಾಯಿ ಆದಾಯ ಗಳಿಸುತ್ತಾನೆ“—ಇದು ಸಮಾಜದಲ್ಲಿ ಸಾಮಾನ್ಯವಾಗಿ ಇರುವ ಅಭಿಪ್ರಾಯ. ಆದರೆ ನಿಜವಾಗಿಯೂ ರೈತನ ಆದಾಯ ಎಷ್ಟು ಎಂಬ ಲೆಕ್ಕವನ್ನು ಎಷ್ಟು ಜನ ಹಾಕಿದ್ದಾರೆ?

ಇಂದು ಅನೇಕ ವಿದ್ಯಾವಂತರು ತಮ್ಮ ಹೆಚ್ಚಿನ ಸಂಬಳದ ಉದ್ಯೋಗವನ್ನು ಬಿಟ್ಟು ಕೃಷಿಯತ್ತ ಮುಖ ಮಾಡುತ್ತಿದ್ದಾರೆ. “ಸ್ವಂತ ಜಮೀನು ಖರೀದಿಸಿ, ತೋಟ ಮಾಡಿ, ಸ್ವತಂತ್ರವಾಗಿ ಬದುಕೋಣ” ಎಂಬ ಕನಸಿನೊಂದಿಗೆ ಲಕ್ಷಾಂತರ ರೂಪಾಯಿ ಹೂಡಿಕೆ ಮಾಡುತ್ತಾರೆ. ಆರಂಭದ ಕೆಲವು ವರ್ಷಗಳು ಅವರಿಗೆ ತೃಪ್ತಿ ಸಿಗುತ್ತದೆ. ಏಕೆಂದರೆ ಉದ್ಯೋಗದಲ್ಲಿದ್ದಾಗ ಉಳಿಸಿಕೊಂಡಿದ್ದ ಹಣ ಅವರ ಕೈಯಲ್ಲಿರುತ್ತದೆ. ಆದರೆ ಆ ಉಳಿತಾಯದ ಹಣ ಖಾಲಿಯಾಗುತ್ತಿದ್ದಂತೆ ಕೃಷಿಯ ನಿಜವಾದ ಮುಖ ಅವರಿಗೆ ಗೋಚರಿಸುತ್ತದೆ.

ಕೃಷಿ ಎನ್ನುವುದು ನಿಶ್ಚಿತ ವರಮಾನದ ವೃತ್ತಿಯಲ್ಲ. ಇದು ಯಾವುದೇ ರೀತಿಯ ಒತ್ತಡವಿಲ್ಲದ ಉದ್ಯೋಗವೂ ಅಲ್ಲ. ರೈತನ ಅರ್ಜನೆ ಸಂಪೂರ್ಣವಾಗಿ ಅವನ ನಿಯಂತ್ರಣದಲ್ಲಿಲ್ಲ. ಮಳೆ, ಬರ, ಗಾಳಿ, ಪ್ರವಾಹ, ಕೀಟರೋಗ, ಮಾರುಕಟ್ಟೆ ಬೆಲೆ, ಕಾರ್ಮಿಕರ ಲಭ್ಯತೆ—ಇವೆಲ್ಲವೂ ರೈತನ ವರಮಾನವನ್ನು ನಿರ್ಧರಿಸುತ್ತವೆ. ಈ ಕಾರಣಕ್ಕಾಗಿಯೇ ಭಾರತದಲ್ಲಿ ಕೃಷಿ ವರಮಾನಕ್ಕೆ ಆದಾಯ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ. ಏಕೆಂದರೆ ಕೃಷಿಯ ವರಮಾನವು ಯಾವುದೇ ಸಂಬಳದ ಉದ್ಯೋಗದಂತೆ ನಿಶ್ಚಿತವಾಗಿರುವುದಿಲ್ಲ.

ಇಲ್ಲಿ ತೋರಿಸಿದ ಚಿತ್ರ ಕೇವಲ ಲೇಖನಕ್ಕೆ ಕಾಲ್ಪನಿಕ ಮಾತ್ರ

ಒಬ್ಬ ಕೃಷಿಕನ ಆದಾಯದ ಲೆಕ್ಕ ಹಾಕೋಣ;

ಒಬ್ಬ ಕೃಷಿಕ 2.5 ಹೆಕ್ಟೇರ್ ಜಮೀನನ್ನು ಸುಮಾರು ಒಂದು ಕೋಟಿ ರೂಪಾಯಿ ನೀಡಿ ಖರೀದಿಸಿದ್ದಾನೆ ಎಂದು ಭಾವಿಸೋಣ.

ಅವನು ಆ ಜಮೀನಿನಲ್ಲಿ

  • 2,500 ಅಡಿಕೆ ಮರಗಳು,
  • 150 ತೆಂಗಿನ ಮರಗಳು,
  • ಅಂತರಬೆಳೆಯಾಗಿ ಕೋಕೋ,
  • ಕರಿಮೆಣಸು,
  • ಬಾಳೆ ಇತ್ಯಾದಿ.. ಬೆಳೆಸಿದ್ದಾನೆ.

ಈ ತೋಟದಿಂದ ವರ್ಷಕ್ಕೆ ₹15–16 ಲಕ್ಷಗಳಷ್ಟು ಒಟ್ಟು ಅರ್ಜನೆ (Gross Income) ಬರುತ್ತದೆ.

ಈ ಅಂಕಿಯನ್ನು ನೋಡಿ ಬಹುತೇಕ ಜನರು “ಇವನು ಲಕ್ಷಾಧಿಪತಿ ರೈತ” ಎಂದು ಭಾವಿಸುತ್ತಾರೆ.

ಖರ್ಚಿನ ಲೆಕ್ಕ ನೋಡೋಣ:

ಕಾರ್ಮಿಕ ವೆಚ್ಚ

ತೋಟದ ನಿರ್ವಹಣೆಗೆ ಪ್ರತಿದಿನ ಮೂರು ಸ್ಥಾಯಿ ಕಾರ್ಮಿಕರು ಅಗತ್ಯ.

ವರ್ಷದ ಸರಾಸರಿ ಕೆಲಸದ ದಿನಗಳು – 1,068 ಮನುಷ್ಯದಿನಗಳು

ಪ್ರತಿದಿನದ ಕೂಲಿ – ₹650

ಒಟ್ಟು ಕೂಲಿ

₹6,94,200

ಇವರಿಗೆ ಬೆಳಗಿನ ಚಹಾ, ಉಪಾಹಾರ, ಮಧ್ಯಾಹ್ನದ ಊಟ ಹಾಗೂ ಸಂಜೆ ಚಹಾ ನೀಡಬೇಕು.

ಅದರ ವೆಚ್ಚ

₹1,06,800

ಒಟ್ಟು ಕಾರ್ಮಿಕ ವೆಚ್ಚ

₹8,01,000

ಗೊಬ್ಬರ ಮತ್ತು ಬೆಳೆ ಸಂರಕ್ಷಣೆ

ಸಾವಯವ ಗೊಬ್ಬರ, ರಾಸಾಯನಿಕ ಗೊಬ್ಬರ, ಸೂಕ್ಷ್ಮ ಪೋಷಕಾಂಶಗಳು ಹಾಗೂ ಬೆಳೆ ಸಂರಕ್ಷಣಾ ವೆಚ್ಚ

₹1,50,000

ನಿರ್ವಹಣಾ ವೆಚ್ಚ

ಪಂಪ್, ನೀರಾವರಿ, ಉಪಕರಣಗಳ ದುರಸ್ತಿ, ವಿದ್ಯುತ್ ಹಾಗೂ ಇತರೆ ನಿರ್ವಹಣಾ ವೆಚ್ಚ

₹50,000

ತೋಟದ ಮಾಲೀಕರ ನಿರ್ವಹಣಾ ವೆಚ್ಚ

ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಕಾರ್ಮಿಕರ ಜೊತೆಗೆ ಕೆಲಸ ಮಾಡುವ, ಯೋಜನೆ ರೂಪಿಸುವ, ಮಾರುಕಟ್ಟೆ ನೋಡಿಕೊಳ್ಳುವ, ಗೊಬ್ಬರ ಖರೀದಿ, ಬೆಳೆ ನಿರ್ವಹಣೆ ಮುಂತಾದ ಕೆಲಸಗಳಿಗೆ ಮಾಲೀಕರ ಸಮಯಕ್ಕೂ ಮೌಲ್ಯವಿದೆ.

ದಿನಕ್ಕೆ ₹1,000 ಎಂದು ಪರಿಗಣಿಸಿದರೆ

₹3,65,000

ಅನಿರೀಕ್ಷಿತ ವೆಚ್ಚ

ಸಣ್ಣಪುಟ್ಟ ದುರಸ್ತಿ, ಹೆಚ್ಚುವರಿ ಕೂಲಿ, ಸಾರಿಗೆ ಹಾಗೂ ಇತರೆ ವೆಚ್ಚ

₹50,000

ಒಟ್ಟು ವಾರ್ಷಿಕ ವೆಚ್ಚ

  • ಕಾರ್ಮಿಕರ ಕೂಲಿ – ₹6,94,200
  • ಕಾರ್ಮಿಕರ ಆಹಾರ – ₹1,06,800
  • ಗೊಬ್ಬರ ಮತ್ತು ಬೆಳೆ ಸಂರಕ್ಷಣೆ – ₹1,50,000
  • ನಿರ್ವಹಣೆ – ₹50,000
  • ಮಾಲೀಕರ ನಿರ್ವಹಣಾ ವೆಚ್ಚ – ₹3,65,000
  • ಇತರೆ ವೆಚ್ಚ – ₹50,000

ಒಟ್ಟು ವೆಚ್ಚ – ₹14,16,000

ಒಟ್ಟು ಆದಾಯ ₹15–16 ಲಕ್ಷ ಇದ್ದರೂ, ಉಳಿಯುವುದು ಕೇವಲ ₹₹84,000 ರಿಂದ 1.84  ಲಕ್ಷದೊಳಗೆ.

ಇದರಿಂದಲೇ ಕುಟುಂಬದ ಜೀವನ, ಮಕ್ಕಳ ಶಿಕ್ಷಣ, ವೈದ್ಯಕೀಯ ವೆಚ್ಚ, ಮದುವೆ, ಮನೆ ನಿರ್ವಹಣೆ ಹಾಗೂ ಇತರ ಸಾಮಾಜಿಕ ಜವಾಬ್ದಾರಿಗಳನ್ನು ನಿಭಾಯಿಸಬೇಕಾಗುತ್ತದೆ.

ಹೆಚ್ಚು ಅಂತರಬೆಳೆ ಎಂದರೆ ಹೆಚ್ಚು ಲಾಭವೇ?

ಹೆಚ್ಚು ಅಂತರಬೆಳೆಗಳನ್ನು ಬೆಳೆಯುವುದರಿಂದಲೇ ಹೆಚ್ಚು ಲಾಭ ಸಿಗುತ್ತದೆ ಎಂದು ಭಾವಿಸುವುದು ತಪ್ಪು. ಅಂತರಬೆಳೆಗಳ ಸಂಖ್ಯೆಯೊಂದಿಗೆ ಕಾರ್ಮಿಕರ ಅವಶ್ಯಕತೆ ಮತ್ತು ನಿರ್ವಹಣಾ ವೆಚ್ಚವೂ ಗಣನೀಯವಾಗಿ ಹೆಚ್ಚುತ್ತದೆ. ಆದರೆ ಕೃಷಿ ಉತ್ಪನ್ನಗಳ ಮಾರುಕಟ್ಟೆ ಬೆಲೆ ಕುಸಿದರೆ ಆದಾಯ ತಕ್ಷಣ ಕಡಿಮೆಯಾಗುತ್ತದೆ; ಕಾರ್ಮಿಕರ ಕೂಲಿ ಮಾತ್ರ ವರ್ಷದಿಂದ ವರ್ಷಕ್ಕೆ ಸರಾಸರಿ 10% ರಷ್ಟು ಹೆಚ್ಚುತ್ತಲೇ ಹೋಗುತ್ತದೆ. ಪರಿಣಾಮವಾಗಿ ಹೆಚ್ಚುವರಿ ಉತ್ಪಾದನೆಯಿದ್ದರೂ ನಿವ್ವಳ ಲಾಭ ಕಡಿಮೆಯಾಗುವ ಸಾಧ್ಯತೆ ಹೆಚ್ಚಾಗುತ್ತದೆ.

ರೈತ ಉಳಿತಾಯ ಮಾಡುವುದು ಹೇಗೆ?

ರೈತ ಹಸು ಸಾಕಿದರೆ ಸಾವಯವ ಗೊಬ್ಬರ ಸಿಗುತ್ತದೆ, ಹಾಲು ಸಿಗುತ್ತದೆ. ಆದರೆ ಅದರ ನಿರ್ವಹಣಾ ವೆಚ್ಚವೂ ಸೇರಿಕೊಳ್ಳುತ್ತದೆ.

ಹಲವಾರು ರೈತರು ತಮ್ಮ ಕುಟುಂಬದ ಖರ್ಚನ್ನೇ ಕಡಿಮೆ ಮಾಡಿ ಬದುಕುತ್ತಾರೆ. ಹೊಸ ಬಟ್ಟೆ ಖರೀದಿಸುವುದಿಲ್ಲ, ತಮ್ಮ ಅಗತ್ಯಗಳನ್ನು ಮುಂದೂಡುತ್ತಾರೆ, ಮಕ್ಕಳಿಗಾಗಿ ಮಾತ್ರ ಖರ್ಚು ಮಾಡುತ್ತಾರೆ.

ನಮ್ಮ ಗ್ರಾಮೀಣ ಭಾಷೆಯಲ್ಲಿ ಇದನ್ನು ಬಾಯಿ ಕಟ್ಟಿಕೊಂಡು ಹೊಟ್ಟೆ ಕಟ್ಟಿಕೊಂಡು ಬದುಕುವುದು ಎಂದು ಹೇಳುತ್ತಾರೆ.

ಇನ್ನೂ ಕೆಲ ರೈತರಿಗೆ ಸರ್ಕಾರಿ ಉದ್ಯೋಗ, ಖಾಸಗಿ ಉದ್ಯೋಗ, ವ್ಯಾಪಾರ ಅಥವಾ ಇತರ ಆದಾಯದ ಮೂಲಗಳಿರುತ್ತವೆ. ಅಂತಹ ಕುಟುಂಬಗಳಿಗೆ ಕೃಷಿ ಒಂದು ಪೂರಕ ಆದಾಯವಾಗುತ್ತದೆ.

ಆದರೆ ಪೂರ್ಣಕಾಲಿಕ ಕೃಷಿಕನಿಗೆ ಕೃಷಿಯೇ ಏಕೈಕ ಆದಾಯವಾದರೆ, ಉಳಿತಾಯ ಮಾಡುವುದು ಅತ್ಯಂತ ಕಷ್ಟಕರವಾಗುತ್ತದೆ. ಸಾಲವು ಬೆಳೆಯುತ್ತಾ ಹೋಗುತ್ತದೆ. ನಿವೃತ್ತಿ ಜೀವನ ಎಂಬುದಿಲ್ಲ. ಸಾಯುವಾಗ ಸಾಲದ ಹೊರೆಯಲ್ಲೇ ಉಳಿದುಬಿಡುತ್ತಾನೆ.

ಮುಂದಿನ ಪೀಳಿಗೆ ಕೃಷಿಯನ್ನು ಏಕೆ ಬಿಡುತ್ತಿದೆ?

ಇಂದು ಅನೇಕ ರೈತರು ತಮ್ಮ ಮಕ್ಕಳಿಗೆ ಕೃಷಿ ಮಾಡು ಎಂದು ಹೇಳುವುದಿಲ್ಲ.

ಅವರು ಹೇಳುವುದು ಒಂದೇ:ಚೆನ್ನಾಗಿ ಓದುಒಳ್ಳೆಯ ಉದ್ಯೋಗ ಮಾಡುಕೃಷಿ ತುಂಬಾ ಅನಿಶ್ಚಿತವಾಗಿದೆ.”

ಇದು ಕೃಷಿಯನ್ನು ಪ್ರೀತಿಸದ ಕಾರಣವಲ್ಲ. ಕೃಷಿಯಿಂದ ಸುರಕ್ಷಿತ ಜೀವನ ಸಿಗುತ್ತಿಲ್ಲ ಎಂಬ ಕಹಿ ಅನುಭವವೇ ಕಾರಣ.ಇಂದು ಬಹುತೇಕ ಮನೆಗಳಲ್ಲಿ ಪ್ರಾಯ ಮೀರುತ್ತಿರುವವರು ಕೃಷಿ ವೃತ್ತಿಯಲ್ಲಿದ್ದಾರೆ. ಮಕ್ಕಳು ಮೊಮ್ಮಕ್ಕಳು ಬೇರೆ ವೃತ್ತಿ , ಹೆಚ್ಚಿನ ನಿಶ್ಚಿತ ಸಂಪಾದನೆ ಹುಡುಕಿ ವಿದೇಶದಲ್ಲೋ , ದೇಶದ ಒಳಗೋ ಸುಖವಾಗಿದ್ದಾರೆ. ಹಿರಿಯರಿಗೆ ತಾನು ಮಾಡಿದ ಕೃಷಿಯ ಮೇಲಿನ ಪ್ರೀತಿ. ಮಕ್ಕಳು ನೀವು ಅದನ್ನು ಬಿಟ್ಟು ಇಲ್ಲಿ ಬನ್ನಿ ನಾವು ನಿಮ್ಮನ್ನು ನೋಡಿಕೊಳ್ಳುತ್ತೇವೆ ಎನ್ನುತ್ತಾರೆ. ಇಂತಹ ಸ್ಥಿತಿ ಬಂದಿದೆ.
 

ಸಮಾರೋಪ;

ಕೃಷಿಕ ತನ್ನ ಕೆಲಸದ ಮಾಲೀಕ ಎಂಬುದು ನಿಜ. ಆದರೆ ಅವನೇ ಎಲ್ಲಾ ಅಪಾಯಗಳ ಮಾಲೀಕ ಕೂಡ. ಅವನಿಗೆ ನಿಶ್ಚಿತ ಸಂಬಳವಿಲ್ಲ, ವಾರ್ಷಿಕ ವೇತನ ಹೆಚ್ಚಳವಿಲ್ಲ, ನಿವೃತ್ತಿ ವೇತನವಿಲ್ಲ, ರಜೆಯಿಲ್ಲ, ಮತ್ತು ವರ್ಷಪೂರ್ತಿ ಮಾಡಿದ ಪರಿಶ್ರಮಕ್ಕೆ ಖಚಿತ ಆದಾಯವೂ ಇಲ್ಲ.

ಸಮಾಜವು ರೈತನ ಆದಾಯವನ್ನು ಅವನು ಮಾರಾಟ ಮಾಡಿದ ಬೆಳೆಗಳ ಒಟ್ಟು ಮೌಲ್ಯದಿಂದ ಅಳೆಯಬಾರದು. ನಿವ್ವಳ ಆದಾಯವನ್ನು ಲೆಕ್ಕ ಹಾಕುವಾಗ ಕಾರ್ಮಿಕ ವೆಚ್ಚ, ಗೊಬ್ಬರ, ನಿರ್ವಹಣೆ, ಕುಟುಂಬದ ಪರಿಶ್ರಮ, ಮಾರುಕಟ್ಟೆ ಅಪಾಯ, ಹವಾಮಾನ ಅನಿಶ್ಚಿತತೆ ಮತ್ತು ರೈತನ ಜೀವನದ ತ್ಯಾಗಗಳನ್ನೂ ಪರಿಗಣಿಸಬೇಕು.

ರೈತರಿಗೆ ಸಹಾನುಭೂತಿ ಬೇಡ; ಅವರ ಪರಿಶ್ರಮಕ್ಕೆ ನ್ಯಾಯಯುತ ಬೆಲೆ ಬೇಕು. ಕೃಷಿ ಮುಂದಿನ ಪೀಳಿಗೆಗೂ ಬದುಕಿನ ವೃತ್ತಿಯಾಗಬೇಕಾದರೆ, ಅದು ಆರ್ಥಿಕವಾಗಿ ಲಾಭದಾಯಕವಾಗಿಯೂ ಗೌರವಯುತವಾಗಿಯೂ ಇರಬೇಕು. ಆಗ ಮಾತ್ರ ದೇಶದ ಆಹಾರ ಭದ್ರತೆಯೂ ಸುರಕ್ಷಿತವಾಗಿರುತ್ತದೆ.

Leave a Reply

Your email address will not be published. Required fields are marked *

error: Content is protected !!