ರೈತರೆನಿಸಿಕೊಂಡ ಪ್ರತೀಯೊಬ್ಬರೂ ಸಾವಯವ ಪದಾರ್ಥಕ್ಕೂ ಸಾವಯವ ಗೊಬ್ಬರಕ್ಕೂ ಇರುವ ವ್ಯತ್ಯಾಸ ತಿಳಿದಿರಲೇಬೇಕು.ಇಂದಿನ ಕೃಷಿಯಲ್ಲಿ ಹೆಚ್ಚಿನ ರೈತರು ಬೆಳೆಗಳಿಗೆ ರಾಸಾಯನಿಕ ಗೊಬ್ಬರಗಳು ಹಾಗೂ ಸಾವಯವ ಗೊಬ್ಬರಗಳ ಬಳಕೆಗೆ ಹೆಚ್ಚಿನ ಮಹತ್ವ ನೀಡುತ್ತಿದ್ದಾರೆ. ಆದರೆ, ಉತ್ತಮ ಇಳುವರಿ ಹಾಗೂ ದೀರ್ಘಕಾಲೀನ ಮಣ್ಣಿನ ಫಲವತ್ತತೆಗೆ ಅತ್ಯಗತ್ಯವಾದದದ್ದು “ಸಾವಯವ ಪದಾರ್ಥ (Organic Matter)” ಇದರ ಮಹತ್ವವನ್ನು ಅನೇಕರು ಅರಿತಿಲ್ಲ. ಬಹುತೇಕ ರೈತರು ಸಾವಯವ ಪದಾರ್ಥ ಮತ್ತು ಸಾವಯವ ಗೊಬ್ಬರ ಒಂದೇ ಎಂದು ಭಾವಿಸುತ್ತಾರೆ. ಆದರೆ ಇವೆರಡರ ಉದ್ದೇಶ ಹಾಗೂ ಕಾರ್ಯ ಸಂಪೂರ್ಣವಾಗಿ ವಿಭಿನ್ನವಾಗಿದೆ.
ತಾಜಾ ಮಣ್ಣು ಯಾವುದೇ ಸಸ್ಯ ಪೊಷಕಾಂಶವನ್ನು ಹೊಂದಿರುವುದಿಲ್ಲ. ಬೇರೆ ಬೇರೆ ಸಾವಯವ ವಸ್ತುಗಳು ಸೇರಿ ಅದಕ್ಕೆ ಫಲವತ್ತತೆ ಸೇರಿಕೊಳ್ಳುತ್ತದೆ. ಕೋಟ್ಯಾಂತರ ವರ್ಷಗಳಿಂದ ಹಾವಸೆ ಗಿಡಗಳಿಂದ ಆರಂಭಿಸಿ, ಸೂಕ್ಷ್ಮಾಣು ಜೀವಿಗಳು ಮರ, ಪ್ರಾಣಿ, ಮನುಷ್ಯ ಮುಂತಾದವುದಳು ಮಣ್ಣಿಗೆ ಸೇರಿ ಅದಕ್ಕೆ ಫಲವತ್ತತೆ ಸೇರಿದೆ. ಇವೆಲ್ಲಾ ಸಾವಯವ ವಸ್ತುಗಳು ಮಣ್ಣಿಗೆ ಸೇರಿದ ಮೇಲೆ ಅದನ್ನು ಕಣ್ಣಿಗೆ ಕಾಣುವ , ಕಾಣದೆ ಇರುವ ಸೂಕ್ಷ್ಮಾಣು ಜೀವಿಗಳು ಕರಗಿಸಿ ಮಣ್ಣಿನ ಜೊತೆ ವಿಲೀನ ಮಾಡಿವೆ. ನಿರಂತರವಾಗಿ ಈ ಕ್ರಿಯೆ ನಡೆಯುತ್ತಾ ಇದ್ದರೆ ಆ ಮಣ್ಣು ಫಲವತ್ತತೆಯನ್ನು ಉಳಿಸಿಕೊಳ್ಳುತ್ತದೆ. ಪೂರೈಕೆ ಕಡಿಮೆಯಾಗಿ ಬಳಕೆ ಹೆಚ್ಚಾದರೆ ಮಣ್ಣಿನ ಫಲವತ್ತತೆ ಕಡಿಮೆಯಾಗುತ್ತದೆ.ಕಾಡಿನಲ್ಲಿ ಯಾವುದೇ ಮಾನವ ಹಸ್ತಕ್ಷೇಪ ಇಲ್ಲದ ಕಾರಣ ಹಣ್ಣೆಲೆ ಉದುರುತ್ತದೆ, ಹಸುರೆಲೆ ಚಿಗುರುತ್ತದೆ. ವಯೋಸಹಜವಾಗಿ ಜೀವ ಜಂತುಗಳು ಸತ್ತು ಮಣ್ಣಿಗೆ ಸೇರುತ್ತದೆ. ಒಣಗೆಲ್ಲು ಉದುರುತ್ತದೆ. ಎಲ್ಲವೂ ಆ ಮಣ್ಣಿನ ಸುಕ್ಷ್ಮಾಣು ಜೀವಿಗಳ ಸಹಕಾರದಿಂದ ಕರಗಿ ಮಣ್ಣಿಗೆ ವಿಲೀನವಾಗುತ್ತದೆ. ಅಲ್ಲಿನ ಮರಕ್ಕೆ ಅದೇ ಪೋಷಕವಾಗಿ ಲಭ್ಯವಾಗುತ್ತಿರುತ್ತದೆ. ಸಾವಯವ ವಸ್ತು ಇಲ್ಲವಾದರೆ ಮಣ್ಣು ಫಲವತ್ತಾಗುವುದಿಲ್ಲ. ಮಣ್ಣಿನ ಫಲವತ್ತತೆ ಮತ್ತು ಬೌತಿಕ, ಜೈವಿಕ ಗುಣಧರ್ಮ ಹೆಚ್ಚಳಕ್ಕೆ ಸಾವಯವ ಪದಾರ್ಥ ಬೇಕೇ ಬೇಕು.ಕಿಲೋ ಲೆಕ್ಕದಲ್ಲಿ ಹಾಕುವ ಸಾವಯವ ಗೊಬ್ಬರ ಈ ಸ್ಥಾನವನ್ನು ತುಂಬಲಾರದು. ಬುಟ್ಟಿ ಬುಟ್ಟಿ ಹಾಕುವ ಸ್ಥೂಲ ಸಾವಯವ ವಸ್ತು ಮಾತ್ರ ಮಣ್ಣಿನ ಸ್ಥಿತಿಗತಿ ಸುಧಾರಿಸಬಲ್ಲುದು.
ಸಾವಯವ ಗೊಬ್ಬರ – ಸಾವಯವ ಪದಾರ್ಥ:
ಸಾವಯವ ಗೊಬ್ಬರ (Organic Manure) ಎಂದರೆ ಸಸ್ಯಗಳಿಗೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುವ ಗೊಬ್ಬರ. ಇದು ರಸ ಗೊಬ್ಬರದ ಬದಲಿಗೆ ಬಳಸುವ ಪೋಷಕ. ಕೊಟ್ಟಿಗೆ ಗೊಬ್ಬರ, ಕಾಂಪೋಸ್ಟ್, ವರ್ಮಿ ಕಾಂಪೋಸ್ಟ್ ಮುಂತಾದವು ಮುಖ್ಯವಾಗಿ ನೈಟ್ರೋಜನ್, ರಂಜಕ, ಪೊಟ್ಯಾಶ್ ಸೇರಿದಂತೆ ವಿವಿಧ ಪೋಷಕಾಂಶಗಳನ್ನು ಒದಗಿಸುತ್ತವೆ. ಆದರೆ ಸಾವಯವ ಪದಾರ್ಥ (Organic Matter) ಎಂದರೆ ಮಣ್ಣಿನೊಳಗೆ ಸೇರಿಸಲ್ಪಡುವ ಹೆಚ್ಚಿನ ಪ್ರಮಾಣದ ಜೈವಿಕ ವಸ್ತುಗಳು. ಇದರಲ್ಲಿ ಕೊಟ್ಟಿಗೆ ಗೊಬ್ಬರ (FYM), ಹಸಿರು ಎಲೆ ಗೊಬ್ಬರ, ಒಣ ಎಲೆಗಳು, ಬೆಳೆ ಅವಶೇಷಗಳು, ಕಾಡಿನ ಎಲೆ ಕಸ, ಹುಲ್ಲು ಹಾಗೂ ಇತರ ಜೈವಿಕ ವಸ್ತುಗಳು ಸೇರಿವೆ. ಇವುಗಳ ಮುಖ್ಯ ಉದ್ದೇಶ ಮಣ್ಣಿನ ಆರೋಗ್ಯವನ್ನು ಅಥವಾ ರಚನೆಯನ್ನು ಸುಧಾರಿಸುವುದಾಗಿದೆ.

ಪೋಷಕಗಳು ಜೀರ್ಣವಾಗುತ್ತದೆ-ಮತ್ತೆ ಮತ್ತೆ ಪೂರೈಕೆ ಮಾಡಬೇಕು:
ಪ್ರತಿ ವರ್ಷ ನಾವು ಬೆಳೆಯನ್ನು ಕೊಯ್ಲು ಮಾಡುವಾಗ ಮಣ್ಣಿನಿಂದ ಅಪಾರ ಪ್ರಮಾಣದ ಪೋಷಕಾಂಶಗಳು ಹೊರ ಹೋಗುತ್ತವೆ. ಅದರ ಜೊತೆಗೆ ಮಣ್ಣಿನಲ್ಲಿರುವ ಸಾವಯವ ಕಾರ್ಬನ್ ಪ್ರಮಾಣವೂ ಕಡಿಮೆಯಾಗುತ್ತಾ ಹೋಗುತ್ತದೆ. ಈ ನಷ್ಟವನ್ನು ಪ್ರತಿವರ್ಷ ತುಂಬದಿದ್ದರೆ ಮಣ್ಣು ಕ್ರಮೇಣ ತನ್ನ ಫಲವತ್ತತೆಯನ್ನು ಕಳೆದುಕೊಳ್ಳುತ್ತದೆ. ಕೇವಲ ರಾಸಾಯನಿಕ ಗೊಬ್ಬರ ಅಥವಾ ಅಲ್ಪ ಪ್ರಮಾಣದ ಸಾವಯವ ಗೊಬ್ಬರ ಬಳಸುವುದರಿಂದ ಮಾತ್ರ ಮಣ್ಣಿನ ಆರೋಗ್ಯವನ್ನು ಕಾಪಾಡಲು ಸಾಧ್ಯವಿಲ್ಲ. ಆದ್ದರಿಂದ ಪ್ರತಿವರ್ಷ ಸಾಕಷ್ಟು ಪ್ರಮಾಣದಲ್ಲಿ ಸಾವಯವ ಪದಾರ್ಥವನ್ನು ಮಣ್ಣಿಗೆ ಸೇರಿಸುವುದು ಅತ್ಯಗತ್ಯ.
ಸಾವಯವ ಪದಾರ್ಥವು ಮಣ್ಣಿನ ರಚನೆಯನ್ನು ಉತ್ತಮಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಇದು ಮಣ್ಣಿನ ಕಣಗಳನ್ನು ಒಟ್ಟುಗೂಡಿಸಿ ಮಣ್ಣನ್ನು ಪುಡಿಯಾಗಿಸಿ, ಮೃದುವಾಗಿಸಿ, ಗಾಳಿಯಾಡುವಂತೆ ಮಾಡುತ್ತದೆ. ಇದರಿಂದ ಬೇರುಗಳು ಆಳವಾಗಿ ಬೆಳೆಯಲು ಅನುಕೂಲವಾಗುತ್ತದೆ. ಉತ್ತಮ ಬೇರು ಬೆಳವಣಿಗೆಯಿಂದ ಸಸ್ಯಗಳು ನೀರು ಮತ್ತು ಪೋಷಕಾಂಶಗಳನ್ನು ಸುಲಭವಾಗಿ ಹೀರಿಕೊಳ್ಳುತ್ತವೆ. ಪರಿಣಾಮವಾಗಿ ಬೆಳೆಗಳ ಬೆಳವಣಿಗೆ ಉತ್ತಮವಾಗುತ್ತದೆ.
ಮಣ್ಣಿನ ರಚನೆ ಸುಧಾರಣೆಯಾಗುತ್ತಾ ಇರಬೇಕು:
ಸಾವಯವ ಪದಾರ್ಥದ ಮತ್ತೊಂದು ಪ್ರಮುಖ ಪ್ರಯೋಜನವೆಂದರೆ ಇದು ಮಣ್ಣಿನ ಜೈವಿಕ ಮತ್ತು ಬೌತಿಕ ರಚನೆಯನ್ನು ಮೇಲ್ದರ್ಜೆಗೇರಿಸುತ್ತದೆ. ನಾವು ಕೊಡುವ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುವುದು. ಸಾವಯವ ಪದಾರ್ಥ ಸಮೃದ್ಧವಾಗಿರುವ ಮಣ್ಣು ಸ್ಪಂಜಿನಂತೆ ಕೆಲಸ ಮಾಡಿ ಮಳೆಯ ನೀರನ್ನು ಹೆಚ್ಚು ಕಾಲ ಸಂಗ್ರಹಿಸುತ್ತದೆ. ಇದರಿಂದ ಮಳೆ ಇಲ್ಲದ ದಿನಗಳಲ್ಲಿಯೂ ಬೆಳೆಗಳಿಗೆ ಅಗತ್ಯವಾದ ತೇವಾಂಶ ದೊರೆಯುತ್ತದೆ. ಮತ್ತೊಂದೆಡೆ, ಅಧಿಕ ಮಳೆಯ ಸಂದರ್ಭದಲ್ಲಿ ನೀರು ಸರಾಗವಾಗಿ ಬಸಿದು ಹೋಗುವುದರಿಂದ ನೀರು ನಿಲ್ಲುವ ಸಮಸ್ಯೆಯೂ ಕಡಿಮೆಯಾಗುತ್ತದೆ.

ಜೀವಾಣುಗಳೇ ಮಣ್ಣಿನ ಸಂಪತ್ತು:
ಮಣ್ಣಿನಲ್ಲಿರುವ ಕೋಟ್ಯಂತರ ಸೂಕ್ಷ್ಮಜೀವಿಗಳು ಮಣ್ಣಿನ ಜೀವಂತಿಕೆಗೆ ಕಾರಣವಾಗಿವೆ. ಈ ಸೂಕ್ಷ್ಮಜೀವಿಗಳಿಗೆ ಆಹಾರವೇ ಸಾವಯವ ಪದಾರ್ಥ. ಸಾವಯವ ಪದಾರ್ಥ ಹೆಚ್ಚಾದಂತೆ ಉಪಯುಕ್ತ ಬ್ಯಾಕ್ಟೀರಿಯಾ, ಶಿಲೀಂಧ್ರಗಳು, ಎರೆಹುಳುಗಳು ಹಾಗೂ ಇತರ ಜೀವಿಗಳ ಚಟುವಟಿಕೆ ಹೆಚ್ಚಾಗುತ್ತದೆ. ಇವು ಬೆಳೆಗಳಿಗೆ ಲಭ್ಯವಾಗುವಂತೆ ಪೋಷಕಾಂಶಗಳನ್ನು ಬಿಡುಗಡೆ ಮಾಡುತ್ತವೆ, ಮಣ್ಣಿನ ರಚನೆಯನ್ನು ಸುಧಾರಿಸುತ್ತವೆ ಹಾಗೂ ಕೆಲವು ಹಾನಿಕಾರಕ ರೋಗಾಣುಗಳನ್ನು ನಿಯಂತ್ರಿಸಲು ಸಹ ಸಹಾಯ ಮಾಡುತ್ತವೆ. ಆದ್ದರಿಂದ ಜೀವಂತ ಮಣ್ಣಿನ ನಿರ್ಮಾಣಕ್ಕೆ ಸಾವಯವ ಪದಾರ್ಥ ಅತ್ಯಗತ್ಯ.
ಸಾವಯವ ಪದಾರ್ಥವು ಮಣ್ಣಿನ ಪೋಷಕಾಂಶಗಳನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನೂ ಹೆಚ್ಚಿಸುತ್ತದೆ. ಇದರಿಂದ ಗೊಬ್ಬರದಿಂದ ದೊರೆಯುವ ಪೋಷಕಾಂಶಗಳು ತಕ್ಷಣವೇ ತೊಳೆದು ಹೋಗದೆ ನಿಧಾನವಾಗಿ ಸಸ್ಯಗಳಿಗೆ ಲಭ್ಯವಾಗುತ್ತವೆ. ಹೀಗಾಗಿ ಗೊಬ್ಬರದ ಬಳಕೆಯ ದಕ್ಷತೆ ಹೆಚ್ಚುತ್ತದೆ ಹಾಗೂ ಬೆಳೆಗಳು ಪೋಷಕಾಂಶಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತವೆ.
ನಾವು ಮಾಡುವ ತಪ್ಪುಗಳು:
ದುರದೃಷ್ಟವಶಾತ್, ಇಂದು ಅನೇಕ ರೈತರು ಬೆಳೆ ಅವಶೇಷಗಳನ್ನು ಹೊಲದಲ್ಲೇ ಸುಡುವುದು, ಒಣ ಎಲೆಗಳನ್ನು ತೆಗೆದುಹಾಕುವುದು ಅಥವಾ ಕೊಟ್ಟಿಗೆ ಗೊಬ್ಬರವನ್ನು ಸಾಕಷ್ಟು ಪ್ರಮಾಣದಲ್ಲಿ ಬಳಸದೇ ಇರುವುದು ಸಾಮಾನ್ಯವಾಗಿದೆ. ಇಂತಹ ಪದ್ಧತಿಗಳು ಮಣ್ಣಿನ ಸಾವಯವ ಪದಾರ್ಥದ ಪ್ರಮಾಣವನ್ನು ವರ್ಷದಿಂದ ವರ್ಷಕ್ಕೆ ಕಡಿಮೆ ಮಾಡುತ್ತವೆ. ಇದನ್ನು ತಪ್ಪಿಸಲು ಕೊಟ್ಟಿಗೆ ಗೊಬ್ಬರ, ಹಸಿರು ಎಲೆ ಗೊಬ್ಬರ, ಬೆಳೆ ಅವಶೇಷಗಳು, ಕಾಡಿನ ಎಲೆ ಕಸ, ಕಾಂಪೋಸ್ಟ್ ಹಾಗೂ ಸ್ಥಳೀಯವಾಗಿ ಲಭ್ಯವಿರುವ ಇತರ ಜೈವಿಕ ವಸ್ತುಗಳನ್ನು ಪ್ರತಿವರ್ಷ ಮಣ್ಣಿಗೆ ಸೇರಿಸಬೇಕು. ಇದರಿಂದ ಮಣ್ಣಿನ ಸಾವಯವ ಕಾರ್ಬನ್ ಪ್ರಮಾಣ ಹೆಚ್ಚಾಗಿ, ಮಣ್ಣಿನ ಗುಣಮಟ್ಟ ನಿರಂತರವಾಗಿ ಸುಧಾರಿಸುತ್ತದೆ.
ಸಾವಯವ ಗೊಬ್ಬರ ಬೇರೆ- ಸಾವಯವ ಪದಾರ್ಥ ಬೇರೆ:
ಒಂದು ಪ್ರಮುಖ ವಿಷಯವನ್ನು ರೈತರು ನೆನಪಿಡಬೇಕು. ಸಾವಯವ ಗೊಬ್ಬರ ಮತ್ತು ಸಾವಯವ ಪದಾರ್ಥ ಎರಡೂ ಒಂದೇ ಅಲ್ಲ. ಸಾವಯವ ಗೊಬ್ಬರವು ಮುಖ್ಯವಾಗಿ ಬೆಳೆಗಳಿಗೆ ಪೋಷಕಾಂಶ ಒದಗಿಸುತ್ತದೆ. ಆದರೆ ಸಾವಯವ ಪದಾರ್ಥವು ಮಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ. ಉತ್ತಮ ಮಣ್ಣಿನ ಆರೋಗ್ಯವಿಲ್ಲದೆ ಯಾವುದೇ ಗೊಬ್ಬರವೂ ತನ್ನ ಸಂಪೂರ್ಣ ಪರಿಣಾಮವನ್ನು ತೋರಲು ಸಾಧ್ಯವಿಲ್ಲ.
ಮಣ್ಣಿನ ಆರೋಗ್ಯವೇ ಲಾಭದಾಯಕ ಕೃಷಿಯ ಬುನಾದಿ. ಆರೋಗ್ಯಕರ ಮಣ್ಣು ಇದ್ದರೆ ಬೇರುಗಳು ಸದೃಢವಾಗುತ್ತವೆ, ಸೂಕ್ಷ್ಮಜೀವಿಗಳ ಸಂಖ್ಯೆ ಹೆಚ್ಚುತ್ತದೆ, ನೀರಿನ ಹಿಡಿತ ಹೆಚ್ಚುತ್ತದೆ, ಪೋಷಕಾಂಶಗಳ ಲಭ್ಯತೆ ಉತ್ತಮವಾಗುತ್ತದೆ ಮತ್ತು ಬೆಳೆಗಳು ಪ್ರತಿಕೂಲ ಹವಾಮಾನವನ್ನು ಸಹ ಸುಲಭವಾಗಿ ಎದುರಿಸುತ್ತವೆ. ಇವೆಲ್ಲವೂ ಉತ್ತಮ ಇಳುವರಿ ಹಾಗೂ ಹೆಚ್ಚಿನ ಆದಾಯಕ್ಕೆ ದಾರಿ ಮಾಡಿಕೊಡುತ್ತವೆ.
ಆದ್ದರಿಂದ ಪ್ರತಿಯೊಬ್ಬ ರೈತರೂ ಮಣ್ಣನ್ನು ಕೇವಲ ಗೊಬ್ಬರ ಹಾಕುವ ಜಾಗವೆಂದು ಪರಿಗಣಿಸದೆ, ಜೀವಂತ ಸಂಪತ್ತೆಂದು ನೋಡಬೇಕು. Soil breathes, feeds, and supports life—respect it as a living ecosystem.ಮಣ್ಣಿಗೆ ಪ್ರತಿವರ್ಷ ಸಮರ್ಪಕ ಪ್ರಮಾಣದ ಸಾವಯವ ಪದಾರ್ಥವನ್ನು ಸೇರಿಸುವುದು ಭವಿಷ್ಯದ ಕೃಷಿಯಲ್ಲಿ ಅತ್ಯಂತ ಲಾಭದಾಯಕ ಹೂಡಿಕೆಯಾಗಿದೆ.
“ಗೊಬ್ಬರವು ಬೆಳೆಗೆ ಆಹಾರ ನೀಡುತ್ತದೆ; ಆದರೆ ಸಾವಯವ ಪದಾರ್ಥವು ಮಣ್ಣಿಗೆ ಜೀವ ತುಂಬುತ್ತದೆ. ಮಣ್ಣು ಆರೋಗ್ಯವಾಗಿದ್ದರೆ ಮಾತ್ರ ಕೃಷಿ ಲಾಭದಾಯಕವಾಗುತ್ತದೆ.”
