ಭಾರತದ ಕೆಲವು ಕೃಷಿ ಉತ್ಪನ್ನಗಳಲ್ಲಿ ಕಂಡುಬಂದ ರಾಸಾಯನಿಕ ಅವಶೇಷಗಳಿಂದಾಗಿ ನಮ್ಮ (Chemical Residues).ಇತ್ತೀಚಿನ ದಿನಗಳಲ್ಲಿ ಭಾರತದ ಕೆಲವು ಹಣ್ಣು ಹಂಪಲು ಅಕ್ಕಿ ಇತ್ಯಾದಿಗಳನ್ನು ಕೆಲವು ದೇಶಗಳು ಆಮದು ಮಾಡಲು ನಿರಾಕರಿಸಿರುವ ಸುದ್ದಿ ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ಈ ಸುದ್ದಿಯ ನಂತರ ಹಲವಾರು ಮಾಧ್ಯಮಗಳು ರೈತರು ಬೆಳೆಗಳಲ್ಲಿ ಅತಿಯಾದ ರಾಸಾಯನಿಕಗಳನ್ನು ಸಿಂಪಡಿಸುತ್ತಾರೆ, ಮುಳುಗಿಸುತ್ತಾರೆ ಅಥವಾ ಅನಿಯಮಿತವಾಗಿ ರಸ ಗೊಬ್ಬರಗಳನ್ನು ಬಳಸುತ್ತಾರೆ ಎಂಬ ವರದಿಗಳನ್ನು ಪ್ರಕಟಿಸಿದವು. ಪರಿಣಾಮವಾಗಿ, ಸಾರ್ವಜನಿಕರಲ್ಲಿ “ರೈತರೇ ಈ ಸಮಸ್ಯೆಗೆ ಕಾರಣ” ಎಂಬ ಅಭಿಪ್ರಾಯ ಮೂಡುವಂತಾಗಿದೆ.
ಆದರೆ ನಿಜವಾಗಿಯೂ ರೈತರೇ ಈ ಸಮಸ್ಯೆಗೆ ಸಂಪೂರ್ಣ ಹೊಣೆಗಾರರೇ? ಈ ಪ್ರಶ್ನೆಗೆ ಉತ್ತರ ಹುಡುಕಿದರೆ, ಸಮಸ್ಯೆಯ ಮೂಲ ಇನ್ನೂ ಆಳದಲ್ಲಿರುವುದು ಗೋಚರಿಸುತ್ತದೆ. ಇಲ್ಲಿ ಯಾರದೋ ಹೊಣೆಗೇಡಿತನಕ್ಕೆ ರೈತಾಪಿವರ್ಗ ಬಲಿಪಶುವಾಗುತ್ತಿದೆ. ಬಿಡುವು ರಹಿತ ವೃತ್ತಿ ಮಾಡುವ ವರ್ಗದ ಮೇಲೆ ಎಲ್ಲರೂ ಸವಾರಿ ಮಾಡುವವರೇ. ಕಾರಣ ಅವರಿಗೆ ಪ್ರತಿಕ್ರಿಯಿಸಲು ಬಿಡುವಿಲ್ಲ.
ನಮ್ಮಲ್ಲಿ ಹಿಂದಿನಿಂದಲೂ ಒಂದು ಅಭ್ಯಾಸ ಇದೆ. ಯಾವುದಾದರೂ ಪಂಗಡವನ್ನು, ಗುಂಪನ್ನು ತೆಗಳುವುದು. ಇದು ನಾವು ಚಲಾವಣೆಯಲ್ಲಿ ಇದ್ದೇವೆ ಎಂದು ತೋರಿಸಲು ಮಾಡುವಂತದ್ದು ಹೊರತಾಗಿ ನಿಜವಾಗಿ ಆ ವರ್ಗದಿಂದ , ಗುಂಪಿನಿಂದ ಅವರಿಗೆ ಯಾವ ತೊಂದರೆಯೂ ಆಗಿರುವುದಿಲ್ಲ. ಹೀಗೆ ತೆಗಳುವಾಗ ಯಾವ ವರ್ಗ, ಗುಂಪು ” ಶ್ವಾನ ಬೊಗಳಿದರೆ ದೇವಲೋಕ ಹಾಳಾಗುವುದಿಲ್ಲ” ಎಂದು ಸುಮ್ಮನಿರುತ್ತಾರೆಯೋ ಅಂತದ್ದನ್ನು ಮಾತ್ರ ಆಯ್ಕೆ ಮಾಡುತ್ತಾರೆ. ಅವರು ಯಾವುದಕ್ಕೂ ಪ್ರತಿಕ್ರಿಯಿಸುವುದಿಲ್ಲ. ಇಂತದ್ದು ನಮ್ಮ ದೇಶದಲ್ಲಿ ಕೃಷಿಕರ ಮೇಲೆ ನಡೆಯುತ್ತದೆ. ರಸಗೊಬ್ಬರ, ಕಳೆನಾಶಕ , ಕೀಟನಾಶಕ ಬಳಸಿ ರೈತರು ಭೂಮಿ ಹಾಳು ಮಾಡುತ್ತಾರೆ, ಸಾಮಾಜಿಕ ಆರೋಗ್ಯವನ್ನು ಕೆಡಿಸುತ್ತಾರೆ ಎಂದು ದೂರುವವರು ಹೆಚ್ಚಿನವರು. ರಸಗೊಬ್ಬರ , ಕೀಟನಾಶಕ ಮುಂತಾದವುಗಳ ಪೂರೈಕೆ ಇರುವಾಗ ಬಳಸಬಾರದು ಎಂಬ ಮಾತಿನಲ್ಲಿ ಅರ್ಥವೇ ಇರುವುದಿಲ್ಲ. ಬೆಳೆ ಸಂರಕ್ಷಕಗಳನ್ನು ಹೀಗೆಯೇ ಬಳಸಬೇಕು ಎಂಬ ಶಿಕ್ಷಣ ನೀಡುವ ವ್ಯವಸ್ಥೆ ತಕ್ಷಣವೇ ಸಿಗದಿದ್ದಾಗ ಬಳಸುವವ ತಪ್ಪು ಮಾಡುವುದು ಸಹಜ ತಾನೇ? ( ಒಂದು ರಸ ಗೊಬ್ಬರದ ಚೀಲ, ಕೀಟ,ರೋಗ ನಾಶಕದ ಬಾಟಲಿ, ಕಳೆನಾಶಕ ಇವುಗಳಲ್ಲಿ ಬಳಸುವ ವಿಧಾನ, ಪ್ರಮಾಣ (ಒಂದು ಲೀ. ನೀರಿಗೆ ಇಂತಿಷ್ಟು ಮಿಲಿ) ನಮೂದಾಗಿ ಇಲ್ಲದಿರುವಾಗ ರೈತ ತಪ್ಪು ಎಸಗಿದರೆ ಅದು ಪ್ರಮಾದವಲ್ಲ.
ಮಾರುಕಟ್ಟೆಯಲ್ಲಿ ಗ್ರಾಹಕರ ಮನೋಸ್ಥಿತಿ:
ರಾಸಾಯನಿಕ ಅವಶೇಷ ಇದೆಯೋ ಇಲ್ಲವೋ ನಮಗೆ ಉತ್ತಮ ನೋಟದ ಪದಾರ್ಥ ಬೇಕು. ಇದು ಇಂದಿನ ಮಾರುಕಟ್ಟೆಯಲ್ಲಿ ಗ್ರಾಹಕರ ನಿರೀಕ್ಷೆಗಳು. ದೊಡ್ಡ ಗಾತ್ರದ ಹಣ್ಣು, ಆಕರ್ಷಕ ಬಣ್ಣ, ಯಾವುದೇ ಕಲೆಗಳಿಲ್ಲದ ಹೊಳಪು, ದೀರ್ಘಕಾಲ ತಾಜಾತನ ಮತ್ತು ಒಂದೇ ಗಾತ್ರದ ಉತ್ಪನ್ನಗಳನ್ನು ಅವರು ಬಯಸುತ್ತಾರೆ. ಅಂತದ್ದನ್ನು ಹೆಚ್ಚಿನ ಬೆಲೆಗೆ ಗ್ರಾಹಕರು ಖರೀದಿ ಮಾಡಲು ಹಿಂಜರಿಯುವುದಿಲ್ಲ. ಸ್ವಲ್ಪ ಕಲೆ ಇರುವ, ಗಾತ್ರದಲ್ಲಿ ಸಣ್ಣದಾದ ಅಥವಾ ನೈಸರ್ಗಿಕವಾಗಿ ಬೆಳೆದ ಹಣ್ಣುಗಳನ್ನು ಗ್ರಾಹಕರು ಹೆಚ್ಚಾಗಿ ತಿರಸ್ಕರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ವ್ಯಾಪಾರಿಗಳೂ ಸಹ ಇದೇ ಗುಣಮಟ್ಟದ ಉತ್ಪನ್ನಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ.
ಇಂತಹ ಮಾರುಕಟ್ಟೆಯಲ್ಲಿ ರೈತರು ಬದುಕು ಕಟ್ಟಿಕೊಳ್ಳಬೇಕಾಗಿದೆ. ಬೆಳೆ ಬೆಳೆಯಲು ವರ್ಷಪೂರ್ತಿ ಶ್ರಮಿಸಿದ ರೈತ, ಕೊನೆಗೆ ತನ್ನ ಉತ್ಪನ್ನಕ್ಕೆ ಉತ್ತಮ ಬೆಲೆ ಸಿಗಬೇಕೆಂದು ಬಯಸುವುದು ಸಹಜ. ಮಾರುಕಟ್ಟೆ ಮತ್ತು ಗ್ರಾಹಕರು ರೂಪಿಸಿರುವ ಈ ಗುಣಮಟ್ಟದ ಮಾನದಂಡಗಳನ್ನು ಪೂರೈಸುವ ಒತ್ತಡದಲ್ಲಿ ಕೆಲವು ರೈತರು ವಿವಿಧ ಸಸ್ಯ ಬೆಳವಣಿಗೆ ನಿಯಂತ್ರಕಗಳು, ಬಣ್ಣ ಸುಧಾರಕಗಳು ಅಥವಾ ಕೀಟನಾಶಕಗಳನ್ನು ಅಗತ್ಯಕ್ಕಿಂತ ಹೆಚ್ಚಾಗಿ ಅಥವಾ ತಪ್ಪು ಸಮಯದಲ್ಲಿ ಬಳಸುವ ಪರಿಸ್ಥಿತಿ ಉಂಟಾಗುತ್ತದೆ.
ಇದು ರೈತರ ತಪ್ಪು ಅಲ್ಲ:
ಇದರರ್ಥ ಎಲ್ಲಾ ರೈತರು ತಪ್ಪು ಮಾಡುತ್ತಾರೆ ಎಂದಲ್ಲ. ಬಹುತೇಕ ರೈತರು ತಜ್ಞರ ಸಲಹೆ, ಅಂಗಡಿಗಳ ಮಾರ್ಗದರ್ಶನ ಅಥವಾ ಅನುಭವದ ಆಧಾರದ ಮೇಲೆ ಔಷಧಿಗಳನ್ನು ಬಳಸುತ್ತಾರೆ. ಆದರೆ ಯಾವ ಔಷಧಿಯನ್ನು ಎಷ್ಟು ಪ್ರಮಾಣದಲ್ಲಿ ಬಳಸಬೇಕು, ಕೊನೆಯ ಸಿಂಪಡಣೆ ಮತ್ತು ಕೊಯ್ಲಿನ ನಡುವೆ ಎಷ್ಟು ದಿನಗಳ ಅಂತರ ಇರಬೇಕು (Pre-Harvest Interval), ರಫ್ತು ಗುಣಮಟ್ಟದ ಉತ್ಪನ್ನಗಳನ್ನು ಹೇಗೆ ಉತ್ಪಾದಿಸಬೇಕು ಎಂಬ ಕುರಿತು ಸಮರ್ಪಕ ತರಬೇತಿ ಮತ್ತು ನಿರಂತರ ಮಾರ್ಗದರ್ಶನ ಹಲವೆಡೆ ಇನ್ನೂ ಕೊರತೆಯಾಗಿದೆ. ಹೆಚ್ಚೇಕೆ ಮೊದಲೇ ಹೇಳಿದಂತೆ ನಮ್ಮಲ್ಲಿ ಇನ್ನೂ ಕೃಷಿ ಬಳಕೆಯ ಸಸ್ಯ ಸಂರಕ್ಷಕಗಳ ಪ್ಯಾಕೆಟ್ ನಲ್ಲಿ ಬಳಸುವ ಪ್ರಮಾಣದ ವಿವರಣೆ ಇಲ್ಲ. ಹೆಕ್ಟೇರಿಗೆ ಇಂತಿಷ್ಟು ಎಂದರೆ ಅದು ಭಾರತದ ಸಣ್ಣ ಅತೀಸಣ್ಣ ರೈತರೇ ಇರುವ ದೇಶಕ್ಕೆ ಸೂಕ್ತವಲ್ಲ. ಇಂತಿಷ್ಟು ನೀರಿಗೆ ಇಂತಿಶ್ಟು ಮಿಲಿ. ಎಂದು ನಮೂದಿಸಿರಬೇಕು. ರೈತರು ಬಳಸುವ ಸಮಯದಲ್ಲಿ ಸಲಹೆ ಕೇಳಿದರೆ ಸಲಹೆ ಸಿಗುವಂತಿರಬೇಕು. ಅಂತಹ ವ್ಯವಸ್ಥೆ ನಮ್ಮಲ್ಲಿ ಇಲ್ಲ.
ಆಕರ್ಷಣೆ ಮತ್ತು ಬೆಲೆ ಅನುಕೂಲ:
ಇನ್ನೊಂದು ಪ್ರಮುಖ ಅಂಶವೆಂದರೆ, ರೈತರಿಗೆ ಹಲವಾರು ಬಾರಿ ಉತ್ಪನ್ನದ ಬೆಲೆ ಅದರ ಸುರಕ್ಷತೆಯ ಆಧಾರದ ಮೇಲೆ ಅಲ್ಲ, ಅದರ ಹೊರಗಿನ ಆಕರ್ಷಕತೆಯ ಆಧಾರದ ಮೇಲೆ ನಿರ್ಧಾರವಾಗುತ್ತದೆ. ಕಲೆರಹಿತ, ಹೊಳೆಯುವ ಹಣ್ಣುಗಳಿಗೆ ಹೆಚ್ಚು ಬೆಲೆ ಸಿಗುತ್ತದೆ. ಆದರೆ ನೈಸರ್ಗಿಕವಾಗಿ ಬೆಳೆದ, ಸ್ವಲ್ಪ ಬಣ್ಣದ ವ್ಯತ್ಯಾಸವಿರುವ ಅಥವಾ ಸಣ್ಣ ಕಲೆಗಳಿರುವ ಹಣ್ಣುಗಳಿಗೆ ಕಡಿಮೆ ಬೆಲೆ ನೀಡಲಾಗುತ್ತದೆ. ಈ ವ್ಯವಸ್ಥೆ ರೈತರನ್ನು ಗುಣಮಟ್ಟಕ್ಕಿಂತ ನೋಟಕ್ಕೆ ಆದ್ಯತೆ ನೀಡುವಂತೆ ಮಾಡುತ್ತದೆ. ಹುಳ ಬಿದ್ದ ತರಕಾರಿ ಕೀಟನಾಶಕದ ಸ್ಪರ್ಷಕ್ಕೆ ಒಳಗಾಗದ್ದು, ಹುಳಗಳು ತಿನ್ನುವವನ ಆರೋಗ್ಯಕ್ಕೆ ಹಾನಿಕಾರಕವಲ್ಲ. ಅದು ಅದೇ ತರಕಾರಿಯನ್ನು ತಿಂದು ಬದುಕುವ ಜೀವಿ ಎಂಬ ಜ್ಞಾನ ಸಹ ಗ್ರಾಹಕರಿಗೆ ಇಲ್ಲ. “ಹುಳ ಇರುವ ಈ ತರಕಾರಿ ತಿಂದರೆ ನಾವು ಅನಾರೋಗ್ಯಕ್ಕೆ ಒಳಗಾಗಬಹುದು” ಎಂಬ ಮಾತಾಡುವವರೇ ಹೆಚ್ಚಿನವರು.
ಇದು ರೈತರೊಬ್ಬರ ಸಮಸ್ಯೆ ಅಲ್ಲ:
ರಾಸಾಯನಿಕ ಅವಶೇಷಗಳ ಸಮಸ್ಯೆಯನ್ನು ಕೇವಲ ರೈತರ ಸಮಸ್ಯೆಯೆಂದು ನೋಡುವುದು ಸರಿಯಲ್ಲ. ಇದು ಉತ್ಪಾದಕರಿಂದ ಹಿಡಿದು ಗ್ರಾಹಕರವರೆಗೆ ಇರುವ ಸಂಪೂರ್ಣ ಸರಪಳಿಯ ಜವಾಬ್ದಾರಿಯಾಗಿದೆ. ರೈತರು ಸುರಕ್ಷಿತ ಕೃಷಿ ಪದ್ಧತಿಗಳನ್ನು ಅನುಸರಿಸಬೇಕು. ಕೃಷಿ ಇಲಾಖೆ ಮತ್ತು ವಿಜ್ಞಾನಿಗಳು ವೈಜ್ಞಾನಿಕ ತರಬೇತಿ ನೀಡಬೇಕು. ಕೀಟನಾಶಕ ಮಾರಾಟಗಾರರು ಸರಿಯಾದ ಸಲಹೆ ನೀಡಬೇಕು. ವ್ಯಾಪಾರಿಗಳು ಕೇವಲ ಹೊರನೋಟಕ್ಕೆ ಮಾತ್ರ ಬೆಲೆ ನಿಗದಿಪಡಿಸುವ ಮನೋಭಾವವನ್ನು ಬದಲಾಯಿಸಬೇಕು. ಅಷ್ಟೇ ಅಲ್ಲ, ಗ್ರಾಹಕರೂ ಸಹ ಸ್ವಲ್ಪ ಕಲೆ ಇದ್ದರೂ ಸುರಕ್ಷಿತವಾಗಿ ಬೆಳೆದ ಹಣ್ಣುಗಳನ್ನು ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು.
ಇಂದು ವಿಶ್ವದ ಹಲವು ದೇಶಗಳಲ್ಲಿ “Residue-Free” ಮತ್ತು “Safe Food” ಉತ್ಪಾದನೆಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಭಾರತವೂ ಇದೇ ದಾರಿಯಲ್ಲಿ ಸಾಗಬೇಕಾದರೆ ರೈತರಿಗೆ ವೈಜ್ಞಾನಿಕ ಮಾರ್ಗದರ್ಶನ, ಮಣ್ಣಿನ ಪರೀಕ್ಷೆ, ಸಮಗ್ರ ಕೀಟ ನಿರ್ವಹಣೆ (IPM), ಸಮತೋಲನ ಗೊಬ್ಬರ ಬಳಕೆ, ಜೈವಿಕ ನಿಯಂತ್ರಣ ಕ್ರಮಗಳು ಹಾಗೂ ಸರಿಯಾದ ಕೊಯ್ಲು ಪೂರ್ವ ಅವಧಿಯ ಬಗ್ಗೆ ಹೆಚ್ಚಿನ ಅರಿವು ಮೂಡಿಸಬೇಕು. ತಪ್ಪುಗಳನ್ನು ಶಿಕ್ಷಿಸುವುದಕ್ಕಿಂತ ಅವುಗಳನ್ನು ತಡೆಯುವ ಜ್ಞಾನವನ್ನು ನೀಡುವುದು ಹೆಚ್ಚು ಪರಿಣಾಮಕಾರಿ. ರೈತರು ಉದ್ದೇಶಪೂರ್ವಕವಾಗಿ ಕೀಟ, ರೋಗನಾಶಕ ಬಳಸುವುದಿಲ್ಲ. ಅದು ನಮ್ಮ ದೇಶದಲ್ಲಿ ಪುಕ್ಸಟ್ಟೆ ಸಿಗುವ ವಸ್ತುವಲ್ಲ. ಬೆಳೆದ ಬೆಳೆ ಕೈಸೇರಬೇಕು ಎಂಬ ಒಂದೇ ಕಾರಣಕ್ಕೆ ಇದನ್ನು ಬಳಸುತ್ತಾನೆ.
ಸುರಕ್ಷಿತ ಆಹಾರ ಉತ್ಪಾದನೆ ರೈತರ ಜವಾಬ್ದಾರಿಯಷ್ಟೇ ಅಲ್ಲ, ಸಮಾಜದ ಜವಾಬ್ದಾರಿಯೂ ಹೌದು. ಗ್ರಾಹಕರು ಕೇವಲ ಸುಂದರವಾಗಿ ಕಾಣುವ ಹಣ್ಣುಗಳಿಗಿಂತ ಸುರಕ್ಷಿತ ಆಹಾರಕ್ಕೆ ಆದ್ಯತೆ ನೀಡಲು ಆರಂಭಿಸಿದರೆ, ಮಾರುಕಟ್ಟೆಯೂ ಬದಲಾಗುತ್ತದೆ. ಮಾರುಕಟ್ಟೆ ಬದಲಾಗಿದರೆ ರೈತರ ಉತ್ಪಾದನಾ ಪದ್ಧತಿಗಳೂ ಸಹಜವಾಗಿ ಬದಲಾಗುತ್ತವೆ.
ರೈತರು ದೇಶದ ಅನ್ನದಾತರು. ಅವರನ್ನು ತಪ್ಪಿತಸ್ಥರೆಂದು ಬಿಂಬಿಸುವ ಬದಲು, ಸರಿಯಾದ ತಂತ್ರಜ್ಞಾನ, ವೈಜ್ಞಾನಿಕ ಮಾರ್ಗದರ್ಶನ ಮತ್ತು ನ್ಯಾಯಯುತ ಮಾರುಕಟ್ಟೆ ವ್ಯವಸ್ಥೆಯನ್ನು ಒದಗಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಆರೋಗ್ಯಕರ ಆಹಾರ ಬೇಕಾದರೆ, ಸುರಕ್ಷಿತ ಕೃಷಿಯನ್ನು ಉತ್ತೇಜಿಸುವ ಜೊತೆಗೆ ಸುರಕ್ಷಿತ ಉತ್ಪನ್ನಗಳನ್ನು ಗುರುತಿಸಿ ಖರೀದಿಸುವ ಜವಾಬ್ದಾರಿಯನ್ನು ಗ್ರಾಹಕರೂ ವಹಿಸಬೇಕು.
ಸುರಕ್ಷಿತ ಆಹಾರ ಉತ್ಪಾದನೆ ಹೊಲದಲ್ಲೇ ಆರಂಭವಾಗುತ್ತದೆ; ಆದರೆ ಅದರ ಯಶಸ್ಸು ರೈತ, ವಿಜ್ಞಾನಿ, ವ್ಯಾಪಾರಿ ಮತ್ತು ಗ್ರಾಹಕ – ಈ ನಾಲ್ವರ ಸಹಭಾಗಿತ್ವದ ಮೇಲೆ ಅವಲಂಬಿತವಾಗಿದೆ.
