ತೆಂಗು ಮತ್ತು ಅಡಿಕೆಗಳಂತಹ ಏಕದಳ (Monocot) ತೋಟಗಾರಿಕಾ ಬೆಳೆಗಳಲ್ಲಿ ಗರಿಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಇವುಗಳ ಬೆಳವಣಿಗೆಯ ಸ್ವಭಾವವೇ ವಿಭಿನ್ನವಾಗಿದ್ದು, ಒಂದೇ ಬೆಳವಣಿಗೆ ಕೇಂದ್ರದಿಂದ (ಕಿರೀಟ ಅಥವಾ ಸ್ಪಿಂಡಲ್) ನಿರಂತರವಾಗಿ ಹೊಸ ಎಲೆಗಳು ಹೊರಬರುತ್ತವೆ. ಪ್ರತಿಯೊಂದು ಎಲೆಯೂ ತನ್ನ ವಯಸ್ಸಿನ ಹಂತದ ಪ್ರಕಾರ ಸಸ್ಯದ ದೈಹಿಕ ಕ್ರಿಯೆಗಳಲ್ಲಿ ನಿರ್ದಿಷ್ಟ ಪಾತ್ರ ವಹಿಸುತ್ತದೆ. ಆದರೆ ಅನೇಕ ತೋಟಗಳಲ್ಲಿ ಎಲೆ ಕತ್ತರಿಸುವುದು ಹಾಗೂ ಸಿಂಪಡಣೆ ಮಾಡುವುದನ್ನು ವೈಜ್ಞಾನಿಕ ತಿಳುವಳಿಕೆ ಇಲ್ಲದೆ ಮಾಡಲಾಗುತ್ತಿದೆ. ಇದರಿಂದ ಬೆಳೆಯ ಉತ್ಪಾದನೆ ಮತ್ತು ದೀರ್ಘಕಾಲೀನ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಕಿರಿಯ ಮತ್ತು ಹಳೆಯ ಎಲೆಗಳ ಕಾರ್ಯವನ್ನು ತಿಳಿದುಕೊಂಡು ನಿರ್ವಹಣೆ ಮಾಡಿದರೆ ಉತ್ತಮ ಫಲಿತಾಂಶ ಸಾಧ್ಯ.
ಏಕದಳ ಸಸ್ಯಗಳಲ್ಲಿ ಎಲೆಗಳ ವ್ಯವಸ್ಥೆ;
ತೆಂಗು ಮತ್ತು ಅಡಿಕೆ ಸಸ್ಯಗಳಲ್ಲಿ ಗರಿಗಳು ಮೇಲಿನಿಂದ ಕೆಳಗೆ ಕ್ರಮಬದ್ಧವಾಗಿ ಇರುತ್ತವೆ. ಮೇಲ್ಭಾಗದಲ್ಲಿ ತೆಳು ಹಸಿರು ಬಣ್ಣದ, ಇನ್ನೂ ಸಂಪೂರ್ಣವಾಗಿ ತೆರೆಯದ ಕಿರಿಯ ಎಲೆಗಳು ಇರುತ್ತವೆ. ಮಧ್ಯಭಾಗದಲ್ಲಿ ಸಂಪೂರ್ಣವಾಗಿ ಬೆಳೆದ ಹಸಿರು ಎಲೆಗಳು ಇರುತ್ತವೆ. ಕೆಳಭಾಗದಲ್ಲಿ ಹಳೆಯ, ಹಳದಿಯಾಗುತ್ತಿರುವ ಅಥವಾ ಒಣಗುವ ಹಂತದ ಎಲೆಗಳು ಕಾಣಸಿಗುತ್ತವೆ. ಈ ಕ್ರಮಬದ್ಧ ವ್ಯವಸ್ಥೆ ಸಸ್ಯದ ಶಾರೀರಿಕ ಸಮತೋಲನಕ್ಕೆ ಅಗತ್ಯವಾಗಿದೆ.
ಕಿರಿಯ ಎಲೆಗಳ ಪಾತ್ರ:
ಮೇಲಿನ ಅಥವಾ ಕಿರಿಯ ಗರಿಗಳು ಸಸ್ಯದ ಭವಿಷ್ಯದ ಉತ್ಪಾದನಾ ಶಕ್ತಿಯನ್ನು ನಿರ್ಧರಿಸುವ ಪ್ರಮುಖ ಭಾಗಗಳಾಗಿವೆ. ಆರಂಭಿಕ ಹಂತದಲ್ಲಿ ಇವುಗಳ ದ್ಯುತಿಸಂಶ್ಲೇಷಣೆಯ ಪ್ರಮಾಣ ಕಡಿಮೆಯಾದರೂ, ಇವುಗಳಲ್ಲಿ ಕೋಶ ವಿಭಜನೆ, ಉಸಿರಾಟ ಮತ್ತು ಬೆಳವಣಿಗೆಯ ಕ್ರಿಯೆಗಳು ಹೆಚ್ಚು ಸಕ್ರಿಯವಾಗಿರುತ್ತವೆ. ಬೇರುಗಳಿಂದ ಪೂರೈಕೆಯಾದ ಪೋಷಕಾಂಶಗಳು ಮೊದಲು ಕಿರಿಯ ಎಲೆಗಳ ಬೆಳವಣಿಗೆಗೆ ಬಳಸಲ್ಪಡುತ್ತವೆ.
ಕಿರಿಯ ಎಲೆಗಳು ರಾಸಾಯನಿಕ ಹಾನಿ, ಕೀಟ–ರೋಗ ಆಕ್ರಮಣ ಮತ್ತು ದೈಹಿಕ ಗಾಯಗಳಿಗೆ ಅತ್ಯಂತ ಸಂವೇದನಶೀಲವಾಗಿವೆ. ಈ ಹಂತದಲ್ಲಿ ಉಂಟಾಗುವ ಹಾನಿ ಶಾಶ್ವತವಾಗಿರುತ್ತದೆ, ಏಕೆಂದರೆ ಇದೇ ಎಲೆಗಳು ಮುಂದಿನ ದಿನಗಳಲ್ಲಿ ಪ್ರಮುಖ ದ್ಯುತಿಸಂಶ್ಲೇಷಣೆಯ ಎಲೆಗಳಾಗುತ್ತವೆ. ಕಿರಿಯ ಎಲೆಗಳಿಗೆ ಹಾನಿಯಾದರೆ ಸಸ್ಯದ ಮುಂದಿನ ಉತ್ಪಾದನಾ ಸಾಮರ್ಥ್ಯ ಕಡಿಮೆಯಾಗುತ್ತದೆ.
ಹಳೆಯ ಮತ್ತು ಪಕ್ವ ಎಲೆಗಳ ಪಾತ್ರ:
ಮಧ್ಯಭಾಗದಲ್ಲಿರುವ ಪಕ್ವ ಎಲೆಗಳು ದ್ಯುತಿಸಂಶ್ಲೇಷಣೆಯ ಮುಖ್ಯ ಕೇಂದ್ರಗಳು. ಇವು ಆಹಾರವನ್ನು ತಯಾರಿಸಿ, ಹೂ ಬಿಡುವಿಕೆ, ಕಾಯಿ ಬೆಳವಣಿಗೆ, ಬೇರುಗಳ ಚಟುವಟಿಕೆ ಮತ್ತು ಒಟ್ಟಾರೆ ಸಸ್ಯದ ನಿರ್ವಹಣೆಗೆ ಶಕ್ತಿಯನ್ನು ಒದಗಿಸುತ್ತವೆ. ಈ ಎಲೆಗಳು ಪೋಷಕಾಂಶಗಳ ತಾತ್ಕಾಲಿಕ ಸಂಗ್ರಹಣೆಯ ಕೇಂದ್ರಗಳಾಗಿಯೂ ಕಾರ್ಯನಿರ್ವಹಿಸುತ್ತವೆ.
ಹಳೆಯ ಎಲೆಗಳು ಪೋಷಕಾಂಶ ಪುನರ್ ವಿತರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ನೈಟ್ರೋಜನ್, ಫಾಸ್ಫರಸ್, ಪೊಟಾಷ್, ಮ್ಯಾಗ್ನೀಶಿಯಂ ಮೊದಲಾದ ಚಲಿಸುವ ಪೋಷಕಾಂಶಗಳು ಹಳೆಯ ಎಲೆಗಳಿಂದ ಕಿರಿಯ ಭಾಗಗಳಿಗೆ ಸಾಗುತ್ತವೆ. ಆದ್ದರಿಂದ ಪೋಷಕಾಂಶ ಕೊರತೆ ಲಕ್ಷಣಗಳು ಮೊದಲು ಹಳೆಯ ಗರಿಗಳಲ್ಲಿ ಕಾಣಿಸುತ್ತವೆ.
ಉಸಿರಾಟ ಮತ್ತು ಪೋಷಕಾಂಶ ಚಲನೆ:
ಕಿರಿಯ ಎಲೆಗಳಲ್ಲಿ ಉಸಿರಾಟದ ಪ್ರಮಾಣ ಹೆಚ್ಚು, ಏಕೆಂದರೆ ಬೆಳವಣಿಗೆ ಮತ್ತು ಕೋಶ ಚಟುವಟಿಕೆ ತೀವ್ರವಾಗಿರುತ್ತದೆ. ಹಳೆಯ ಎಲೆಗಳಲ್ಲಿ ಉಸಿರಾಟ ಕಡಿಮೆಯಾದರೂ, ಅವು ಶಕ್ತಿ ನಿರ್ಮಾಣದಲ್ಲಿ ನಿರಂತರ ಪಾತ್ರ ವಹಿಸುತ್ತವೆ. ಪೋಷಕಾಂಶಗಳ ಚಲನೆ ಸದಾ ಕಿರಿಯ ಎಲೆಗಳು ಮತ್ತು ಬೆಳೆಯುತ್ತಿರುವ ಹೂ–ಕಾಯಿಗಳಿಗೆ ಆದ್ಯತೆ ನೀಡುವ ರೀತಿಯಲ್ಲಿ ನಡೆಯುತ್ತದೆ. ಹಿರಿಯರ ಬಳುವಳಿ ಕಿರಿಯರಿಗೆ ಎಂಬಂತೆ ಈ ವ್ಯವಸ್ಥೆ.
ಹಳೆಯ ಎಲೆಗಳನ್ನು ಕತ್ತರಿಸಿದರೆ ಏನಾಗುತ್ತದೆ?
ಸಂಪೂರ್ಣವಾಗಿ ಒಣಗಿದ ಗರಿಗಳನ್ನು ತೆಗೆದುಹಾಕುವುದು ಹಾನಿಕಾರಕವಲ್ಲ. ಆದರೆ ಹಸಿರು ಅಥವಾ ಭಾಗಶಃ ಹಳದಿಯಾದ ಎಲೆಗಳನ್ನು ಕತ್ತರಿಸಿದರೆ ದ್ಯುತಿಸಂಶ್ಲೇಷಣೆಯ ಒಟ್ಟು ಪ್ರದೇಶ ಕಡಿಮೆಯಾಗುತ್ತದೆ. ಇದರಿಂದ ಆಹಾರ ಉತ್ಪಾದನೆ ಕುಂಠಿತವಾಗಿ, ಕಾಯಿ ಗೊಂಚಲು, ಗುಚ್ಚದ ಗಾತ್ರ ಮತ್ತು ಒಟ್ಟಾರೆ ಉತ್ಪಾದನೆ ಮೇಲೆ ದುಷ್ಪರಿಣಾಮ ಬೀರುತ್ತದೆ. ಅತಿಯಾದ ಎಲೆ ಕತ್ತರಿಸುವುದು ಸಸ್ಯವನ್ನು ದುರ್ಬಲಗೊಳಿಸಿ, ಕೀಟ–ರೋಗಗಳಿಗೆ ಹೆಚ್ಚು ಒಳಗಾಗುವಂತೆ ಮಾಡುತ್ತದೆ. ಎಲೆಗಳು ಬೆಳವಣಿಗೆ ಆಗಿ ಅದು ತನ್ನಷ್ಟಕ್ಕೆ ಉದುರಿ ಬಿದ್ದರೆ ಅದರಿಂದ ಮರಗಳಿಗೆ ಯಾವ ತೊಂದರೆಯೂ ಇಲ್ಲ. ಒಂದು ವೇಳೆ ಎಲೆ ಅರ್ಧದಿಂದ ಕತ್ತರಿಸಿದರೆ ಅಪಕ್ವ ಬೆಳವಣಿಗೆಯಾಗಿ ಆ ಗರಿ ಒಣಗಿ ತನ್ನಷ್ಟಕ್ಕೆ ಬೀಳದೆ ಅಂಟಿಕೊಂಡಿರುವ ಸಾಧ್ಯತೆ ಹೆಚ್ಚು.
ಕಿರಿಯ ಎಲೆಗಳನ್ನು ಕತ್ತರಿಸಿದ ಪರಿಣಾಮ:
ಕಿರಿಯ ಎಲೆಗಳನ್ನು ಕತ್ತರಿಸುವುದು ಅತ್ಯಂತ ಅಪಾಯಕಾರಿ. ಇದರಿಂದ ಭವಿಷ್ಯದ ಉತ್ಪಾದನೆ ಶಾಶ್ವತವಾಗಿ ಕಡಿಮೆಯಾಗುತ್ತದೆ. ಕಿರೀಟದ ಅಥವಾ ಶಿರದ ಗಾತ್ರ ಸಣ್ಣವಾಗುವುದು, ಹೂ ಬೀಳುವಿಕೆ ತಡವಾಗುವುದು ಮತ್ತು ಸಸ್ಯದ ಬೆಳವಣಿಗೆ ಕುಂಠಿತವಾಗುವುದು ಸಾಮಾನ್ಯ ಪರಿಣಾಮಗಳು. ಸ್ಪಿಂಡಲ್ (ಸುಳಿ) ಭಾಗಕ್ಕೆ ಗಾಯವಾದರೆ ಕೆಲವೊಮ್ಮೆ ಸಸ್ಯ ಸಾಯುವ ಸಾಧ್ಯತೆಯೂ ಇರುತ್ತದೆ. ತಜ್ಞರ ಸಲಹೆ ಇಲ್ಲದೆ ಕಿರಿಯ ಎಲೆಗಳನ್ನು ಎಂದಿಗೂ ಕತ್ತರಿಸಬಾರದು.
ಸಿಂಪಡಣೆ: ಯಾವ ಎಲೆಗಳಿಗೆ?
ವ್ಯವಸ್ಥಿತ ಕೀಟನಾಶಕ ಮತ್ತು ಶಿಲೀಂಧ್ರನಾಶಕಗಳು ಕಿರಿಯ ಮತ್ತು ಪಕ್ವ ಎಲೆಗಳ ಮೂಲಕ ಉತ್ತಮವಾಗಿ ಶೋಷಣೆಯಾಗುತ್ತವೆ. ಆದ್ದರಿಂದ ಸಿಂಪಡಣೆ ಮಾಡುವಾಗ ಕಿರೀಟ ಭಾಗ ಮತ್ತು ಮಧ್ಯದ ಎಲೆಗಳ ಮೇಲೆ ಗಮನ ಕೊಡಬೇಕು.
ಸಂಪರ್ಕ ಔಷಧಗಳಿಗೆ, ಪಕ್ವ ಮತ್ತು ಹಳೆಯ ಎಲೆಗಳ ಮೇಲ್ಮೈಯ ಸಂಪೂರ್ಣ ಆವರಣ ಅಗತ್ಯ. ಆದರೆ ಸಂಪೂರ್ಣ ಒಣಗಿದ ಎಲೆಗಳ ಮೇಲೆ ಸಿಂಪಡಿಸುವುದು ವ್ಯರ್ಥ. ಸ್ಪಿಂಡಲ್ ಭಾಗದಲ್ಲಿ ಅತಿಯಾದ ಔಷಧ ಸೇರುವುದನ್ನು ತಪ್ಪಿಸಬೇಕು.
ರೋಗ – ಕೀಟ ಬಾಧೆ ಹೆಚ್ಚು ಇದ್ದಾಗ:
ರೋಗ – ಕೀಟ ಬಾಧೆ ಮಿತಿ ಮೀರಿದಾಗ ಅದರಲ್ಲೂ ಕೆಲವು ರೋಗಗಳು ಎಲೆಗಳಲ್ಲಿ ಕಂಡು ಬಂದಾಗ ಅಂತಹ ಎಲೆಗಳನ್ನು ಕತ್ತರಿಸಿ ತೆಗೆಯುವುದು ಅಗತ್ಯವೆನಿಸುತ್ತದೆ. ರೋಗ ಬಾಧಿತ ಎಲೆಗಳನ್ನು ಕತ್ತರಿಸಿ ತೆಗೆದು ತೋಟದಿಂದ ದೂರ ಸಾಗಿಸುವುದರಿಂದ ರೋಗಾಣುಗಳ ಸಂಖ್ಯೆಯನ್ನು ಕಡಿಮೆ ಮಾಡಬಹುದು. ಸಸ್ಯಗಳಾಗಲಿ, ಪ್ರಾಣಿ, ಮನುಷ್ಯರಾಗಲಿ, ರೋಗ ಪಿಡಿತ ಅಂಗಾಂಶಗಳನ್ನು ಸ್ವಚ್ಚ ಮಾಡದೆ ಔಷದೋಪಚಾರ ಮಾಡಿದರೆ ಫಲ ಕಡಿಮೆ. ಸಸ್ಯ ಸಂರಕ್ಷಣೆಯ ಪ್ರತಿಫಲ ಚೆನ್ನಾಗಿ ಸಿಗಬೇಕಿದ್ದರೆ ಅನಿವಾರ್ಯ ಪ್ರಸಂಗಗಳಲ್ಲಿ ಎಲೆ ಕತ್ತರಿಸುವುದನ್ನು ಮಾಡಬೇಕಾಗುತ್ತದೆ. ಆಲ್ಲಿಯೂ ತೀರಾ ಬಲಿತ ಎರಡು ಮೂರು ಎಲೆಗಳನ್ನು ಮಾತ್ರ ಕತ್ತರಿಸಬೇಕು.
ಎಲೆ ರೋಗ ಮತ್ತು ಎಲೆ ಕತ್ತರಿಸುವಿಕೆ:
ಎಲೆಗೆ ಸಂಬಂಧಿಸಿದ ಯಾವುದಾದರೂ ರೋಗ ಬಂದಿದ್ದರೆ, ಆ ರೋಗ ಗಾಳಿ, ನೀರಿನ ಮೂಲಕ ಪ್ರಸಾರವಾಗುವಂತದ್ದಾಗಿದ್ದರೆ , ರೋಗ ಬಾಧಿತ ಎಲೆಗಳನ್ನು ತೆಗೆಯುವುದು ಅನಿವಾರ್ಯ. ಎಲೆ ಚುಕ್ಕೆ ರೋಗ ಬಂದಿದ್ದರೆ ಹಿರಿಯ ಅಥವಾ ಕೆಳಭಾಗದದ ತೀವ್ರ ಹಾನಿಯಾದ ಎರಡು ಮೂರು ಎಲೆ ತೆಗೆದು ಔಷದೋಪಚಾರ ಮಾಡಿದರೆ ಫಲ. ಅದೇ ರೀತಿ ಸುಳಿ ಕೊಳೆ ಬಂದರೆ ಸುಳಿ ತೆಗೆದು ಸ್ವಚ್ಚ ಮಾಡುವುದು ಅನಿವಾರ್ಯ. ತೆಂಗಿನಲ್ಲೂ ಹಾಗೆಯೇ. ಇದು ಅನಿವಾರ್ಯವಾಗಿ ಮಾಡುವಂತದ್ದು. ಇದರಿಂದ ಸ್ವಲ್ಪ ಮರಕ್ಕೆ ಘಾಸಿಯಾದರೂ ರೋಗ ವಾಸಿಯಾಗುವುದು ಇಲ್ಲ ಪ್ರಾಮುಖ್ಯ.
ತೆಂಗು ಮತ್ತು ಅಡಿಕೆಗಳಂತಹ ಏಕದಳ ಸಸ್ಯಗಳಲ್ಲಿ ಕಿರಿಯ, ಪಕ್ವ ಮತ್ತು ಹಳೆಯ ಎಲೆಗಳು ಒಟ್ಟಾಗಿ ಕಾರ್ಯನಿರ್ವಹಿಸುವ ವ್ಯವಸ್ಥೆಯಾಗಿವೆ. ಕಿರಿಯ ಎಲೆಗಳು ಭವಿಷ್ಯದ ಉತ್ಪಾದನೆಗೆ, ಪಕ್ವ ಎಲೆಗಳು ಪ್ರಸ್ತುತ ಉತ್ಪಾದನೆಗೆ ಮತ್ತು ಹಳೆಯ ಎಲೆಗಳು ಪೋಷಕಾಂಶ ಸಮತೋಲನಕ್ಕೆ ಅವಶ್ಯಕ. ಅವೈಜ್ಞಾನಿಕ ಎಲೆ ಕತ್ತರಿಸುವುದು ಮತ್ತು ತಪ್ಪಾದ ಸಿಂಪಡಣೆ ಈ ಸಮತೋಲನವನ್ನು ಹಾಳುಮಾಡುತ್ತದೆ. ಎಲೆಗಳ ನೈಸರ್ಗಿಕ ಪಾತ್ರವನ್ನು ಗೌರವಿಸಿ ನಿರ್ವಹಣೆ ಮಾಡಿದರೆ, ಆರೋಗ್ಯಕರ ಸಸ್ಯಗಳು, ಸ್ಥಿರ ಉತ್ಪಾದನೆ ಮತ್ತು ದೀರ್ಘಕಾಲೀನ ಲಾಭ ಸಾಧ್ಯವಾಗುತ್ತದೆ.
